ಬಿಹಾರದಲ್ಲಿ 2017ರ ಪುನರಾವರ್ತನೆ: ಮುಖ್ಯ ಪಾತ್ರದಲ್ಲಿ ಮತ್ತೆ ನಿತೀಶ್ ಕುಮಾರ್
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ರಾಜ್ಯಪಾಲರಿಗೆ ತಮ್ಮ ರಾಜಿನಾಮೆ ಸಲ್ಲಿಸಿದ್ದು, ಕಳೆದ ಕೆಲವು ದಿನಗಳಿಂದ ಬಿಹಾರ ರಾಜಕಾರಣದಲ್ಲಿ ಸೃಷ್ಟಿಯಾಗಿದ್ದ ನಿಗೂಢತೆಗೆ ಅಂತ್ಯ ಹಾಡಿದ್ದಾರೆ. ಆ ಮೂಲಕ ಮತ್ತೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಮರಳುವ ಸೂಚನೆ ನೀಡಿದ್ದಾರೆ. ಅವರು ಇಂದು ಮತ್ತೆ ರಾಜ್ಯಪಾಲರನ್ನು ಭೇಟಿಯಾಗುವ ನಿರೀಕ್ಷೆ ಇದ್ದು, ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆ ಇದೆ. ಈ ನಡೆಯು 2017ರಲ್ಲಿ ಮಹಾ ಮೈತ್ರಿಕೂಟದ ಸಂಬಂಧವನ್ನು ಕಡಿದುಕೊಂಡ ನಿತೀಶ್ ಕುಮಾರ್ ನಡೆಯ ಪುನರಾವರ್ತನೆಯಾಗಿದೆ ಎಂದು indiatoday.in ವರದಿ ಮಾಡಿದೆ.
ರಾಜಿನಾಮೆ ಸಲ್ಲಿಸುವ ಮೂಲಕ ನಿತೀಶ್ ಕುಮಾರ್ ಇಂಡಿಯಾ ಮೈತ್ರಿಕೂಟದಿಂದ ಹೊರಬಂದಿದ್ದೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಹಿಂದಿನ ದೃಷ್ಟಾಂತದಂತೆಯೆ, ರವಿವಾರ ಜೆಡಿಯು ಶಾಸಕರ ಸಭೆಯನ್ನು ನಡೆಸಿದ ನಿತೀಶ್ ಕುಮಾರ್, ತಾನು ರಾಜಿನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಜೆಡಿಯು ಶಾಸಕರಿಗೆ ಮಾಹಿತಿ ನೀಡಿದರು. ಬಳಿಕ ರಾಜ ಭವನದತ್ತ ತೆರಳಿದರು. ಇದೇ ರೀತಿ 2017ರಲ್ಲೂ ಕೂಡಾ ಪಕ್ಷದ ಶಾಸಕಾಂಗ ಸಭೆಯನ್ನು ಆಯೋಜಿಸಿದ್ದ ನಿತೀಶ್ ಕುಮಾರ್, ರಾಜ ಭವನಕ್ಕೆ ತೆರಳಿದ್ದರು ಹಾಗೂ ತಮ್ಮ ರಾಜಿನಾಮೆ ಪತ್ರ ಸಲ್ಲಿಸಿದ್ದರು.
ಮತ್ತೊಂದೆಡೆ, ಬಿಜೆಪಿ ಶಾಸಕರ ಸಭೆಯು ಮುಂದುವರಿದಿತ್ತು ಹಾಗೂ ಇದರ ಬೆನ್ನಿಗೇ ನಿತೀಶ್ ಕುಮಾರ್ ನಿವಾಸಕ್ಕೆ ತೆರಳಿದ್ದ ಬಿಜೆಪಿ ಶಾಸಕರು, ಅವರೊಂದಿಗೆ ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದರು.
ವೈದ್ಯಕೀಯ ತಪಾಸಣೆಯ ನಂತರ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ರಾಜಭವನಕ್ಕೆ ಮರಳಲಿದ್ದು, ನಂತರ ಅಂತಿಮ ಆಟಕ್ಕೆ ವೇದಿಕೆ ಸಿದ್ಧವಾಗಿದೆ. ಮತ್ತೊಮ್ಮೆ ತಮ್ಮ ಈ ಹಿಂದಿನ ಎನ್ಡಿಎ ಪಾಲುದಾರ ಸುಶೀಲ್ ಮೋದಿಯವರೊಂದಿಗೆ ರಾಜಭವನದ ಕದ ತಟ್ಟಲಿರುವ ನಿತೀಶ್ ಕುಮಾರ್, ಮರಳಿ ಏರ್ಪಟ್ಟಿರುವ ಎನ್ಡಿಎ-ಜೆಡಿಯು ಮೈತ್ರಿಕೂಟದ ನಾಯಕರಾಗಿ ತಮ್ಮ ಹಕ್ಕು ಪ್ರತಿಪಾದಿಸಲಿದ್ದಾರೆ.
ಈ ಸಾಲು ಸಾಲು ಘಟನಾವಳಿಗಳು 2017ರಲ್ಲಿ ಬಿಹಾರದಲ್ಲಿ ಏನು ನಡೆದಿತ್ತೊ ಅದರ ಪುನರಾವರ್ತನೆಯಂತೆಯೇ ಇವೆ.
ಸದ್ಯ, ಮೊದಲಿಗೆ ರಾಜಿನಾಮೆ ಸಲ್ಲಿಸುವಂತೆ ನಿತೀಶ್ ಕುಮಾರ್ ಅವರಿಗೆ ಸೂಚಿಸಿರುವ ಬಿಜೆಪಿ, ಇದಾದ ನಂತರ ತನ್ನ ಬೆಂಬಲದ ಪತ್ರವನ್ನು ನೀಡುವುದಾಗಿ ಅವರಿಗೆ ಹೇಳಿದೆ. ಅದರಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಿನಾಮೆ ಸಲ್ಲಿಸಿದ್ದು, ಶೀಘ್ರವೇ ಬಿಜೆಪಿ ಮತ್ತು ಜೆಡಿಯು ಪಕ್ಷಗಳ ಜಂಟಿ ಶಾಸಕಾಂಗ ಸಭೆ ನಡೆಯಲಿದೆ.
ಇದರ ನಂತರ, ರಾಜ್ಯಪಾಲರನ್ನು ಭೇಟಿಯಾಗಲಿರುವ ಎನ್‍ಡಿಎ ಮೈತ್ರಿಕೂಟವು, ನಿತೀಶ್ ಕುಮಾರ್ ನಾಯಕತ್ವದಲ್ಲಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದೆ.