ಉತ್ತರ ಪ್ರದೇಶ: ಕನ್ವರಿಯಾಗಳ ಮೇಲೆ ಲಾಠಿಚಾರ್ಚ್‌ ಬೆನ್ನಲ್ಲೇ ಎಸ್‌ಎಸ್‌ಪಿ ವರ್ಗಾವಣೆ

Update: 2023-08-01 13:30 GMT

ಬರೇಲಿ: ಬರೇಲಿ ನಗರದಲ್ಲಿ ರವಿವಾರ ಕನ್ವರಿಯಾಗಳ ಗುಂಪೊಂದರ ಮೇಲೆ ಲಾಠಿಚಾರ್ಚ್‌ ನಡೆದ ಬೆನ್ನಲ್ಲೇ ಎಫ್‌ಐಆರ್‌ ದಾಖಲಿಸಿದ ಅಲ್ಲಿನ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಪ್ರಭಾಕರ್‌ ಚೌಧುರಿ ಅವರನ್ನು ಇದಾದ ಮೂರು ಗಂಟೆಗಳಲ್ಲೇ ವರ್ಗಾವಣೆಗೊಳಿಸಲಾಗಿದೆ.

ಈ 2010 ಬ್ಯಾಚಿನ ಐಪಿಎಸ್‌ ಅಧಿಕಾರಿಯನ್ನು ಕಮಾಂಡೆಂಟ್‌ ಆಗಿ ಪ್ರೊವಿನ್ಶಿಯಲ್‌ ಆರ್ಮ್ಡ್‌ ಕಾನ್‌ಸ್ಟಾಬುಲೆರಿಗೆ ನೇಮಿಸಲಾಗಿದೆ. ಠಾಣಾಧಿಕಾರಿ ಅಭಿಷೇಕ್‌ ಸಿಂಗ್‌ ಮತ್ತು ಪೊಲೀಸ್‌ ಔಟ್‌ಪೋಸ್ಟ್‌ ಉಸ್ತುವಾರಿ ಅಮಿತ್‌ ಕುಮಾರ್‌ ಅವರನ್ನು ಅಮಾನತುಗೊಳಿಸಲಾಗಿದೆ.

ಡಿಜೆ ಅಳವಡಿಸಲಾಗಿದ್ದ ಕನ್ವರಿಯಾಗಳ ಮೆರವಣಿಗೆಯು ನಿರ್ದಿಷ್ಟ ಹಾದಿ ಬಿಟ್ಟು ನಗರದಲ್ಲಿ ಅಲ್ಪಸಂಖ್ಯಾತರು ಹೆಚ್ಚಿರುವ ರಸ್ತೆಯಲ್ಲಿ ಸಾಗಲು ಯತ್ನಿಸಿದಾಗ ಪೊಲೀಸರು ತಡೆಯಲು ಯತ್ನಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋವೊಂದರಲ್ಲಿ ಬಿಳಿ ಶರ್ಟ್‌ ಧರಿಸಿದ ವ್ಯಕ್ತಿಯೊಬ್ಬ ಗುಂಪಿನಿಂದ ದಿಢೀರ್‌ ಹೊರಬಂದು ಗಾಳಿಯಲ್ಲಿ ಗುಂಡು ಹಾರಿಸುವುದು ಕಾಣಿಸುತ್ತದೆ.

ಇದರ ಬೆನ್ನಲ್ಲೇ ಪೊಲೀಸರು ಲಾಠಿ ಚಾರ್ಚ್‌ ನಡೆಸಿ ಜನರಲ್ಲಿ ಚದುರಿಸಲು ಯತ್ನಿಸಿದ್ದರು.

ಬರೇಲಿಯ ನೂತನ ಎಸ್‌ಎಸ್ಪಿ ಆಗಿ ಅಧಿಕಾರ ವಹಿಸಿರುವ ಸುಶೀಲ್‌ ಚಂದ್ರಬನ್‌ ಚುಲೆ ಮಾತನಾಡಿ ಈ ಘಟನೆಯ ವರದಿ ಕೇಳಿರುವುದಾಗಿ ತಿಳಿಸಿದ್ದಾರೆ. ವೀಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿ ಮತ್ತಾತನ ಸಹವರ್ತಿಗಳನ್ನು ಪತ್ತೆಹಚ್ಚುವ ಪ್ರಯತ್ನ ಮುಂದುವರಿದಿದೆ ಎಂದು ಅವರು ಹೇಳಿದರು.

ಕನ್ವರ್‌ ಪ್ರತಿಭಟನೆಯನ್ನು ತಡೆದು ರಸ್ತೆಗೆ ಅಡ್ಡಿ ಪಡಿಸಿದವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು, ಈ ಘಟನೆಯಲ್ಲಿ ಹೊರಗಿನವರ ಕೈವಾಡವಿರುವ ಶಂಕೆಯಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News