15 ವರ್ಷಗಳಲ್ಲಿ 41.5 ಕೋ.ಜನರು ಬಡತನದಿಂದ ಹೊರಕ್ಕೆ, ಭಾರತದ ಗಮನಾರ್ಹ ಸಾಧನೆ: ವಿಶ್ವಸಂಸ್ಥೆ

Update: 2023-07-11 16:37 GMT

ಹೊಸದಿಲ್ಲಿ: 2005-06ರಿಂದ 2019-21ರವರೆಗಿನ ಕೇವಲ 15 ವರ್ಷಗಳಲ್ಲಿ 41.5 ಕೋಟಿ ಜನರು ಬಡತನದಿಂದ ಹೊರಕ್ಕೆ ಬಂದಿದ್ದಾರೆ ಎಂದು ಮಂಗಳವಾರ ಹೇಳುವ ಮೂಲಕ ವಿಶ್ವಸಂಸ್ಥೆಯು ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಜನಸಂಖ್ಯೆಯ ದೇಶವಾಗಿರುವ ಭಾರತದ ಗಮನಾರ್ಹ ಸಾಧನೆಯನ್ನು ಎತ್ತಿ ತೋರಿಸಿದೆ.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ) ಮತ್ತು ಆಕ್ಸಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ (OPHI) ಜಂಟಿಯಾಗಿ ಬಹುಆಯಾಮದ ಬಡತನ ಸೂಚ್ಯಂಕ (MPI)ದ ಪರಿಷ್ಕೃತ ಆವೃತ್ತಿಯನ್ನು ಆಕ್ಸಫರ್ಡ್ ವಿವಿಯಲ್ಲಿ ಬಿಡುಗಡೆಗೊಳಿಸಿವೆ. ಭಾರತ ಸೇರಿದಂತೆ 25 ದೇಶಗಳು 15 ವರ್ಷಗಳಲ್ಲಿ ತಮ್ಮ ಜಾಗತಿಕ ಎಂಪಿಐ ಮೌಲ್ಯಗಳನ್ನು ಅರ್ಧಕ್ಕಿಳಿಸುವಲ್ಲಿ ಯಶಸ್ವಿಯಾಗುವ ಮೂಲಕ ತ್ವರಿತ ಪ್ರಗತಿಯನ್ನು ಸಾಧಿಸಬಹುದು ಎನ್ನುವುದನ್ನು ತೋರಿಸಿವೆ ಎಂದು ವರದಿಯು ಹೇಳಿದೆ. ಭಾರತ, ಕಾಂಬೋಡಿಯಾ, ಚೀನಾ, ಕಾಂಗೋ, ಹೊಂಡುರಾಸ್, ಇಂಡೋನೇಶ್ಯಾ, ಮೊರೊಕ್ಕೋ, ಸೆರ್ಬಿಯಾ ಮತ್ತು ವಿಯೆಟ್ನಾಂ ಈ ದೇಶಗಳಲ್ಲಿ ಸೇರಿವೆ.

ಯುಎನ್ಡಿಪಿ ಪ್ರಕಾರ, ಕೇವಲ 15 ವರ್ಷಗಳಲ್ಲಿ (2005-06 ರಿಂದ 2019-21) 41.5 ಕೋ.ಜನರು ಬಡತನದಿಂದ ಹೊರಬರುವ ಮೂಲಕ ಭಾರತವು ಬಡತನದಲ್ಲಿ ಗಮನಾರ್ಹ ಇಳಿಕೆಯನ್ನು ಸಾಧಿಸಿದೆ. ಚೀನಾದಲ್ಲಿ 2010-14ರ ನಡುವೆ 6.90 ಕೋ.ಮತ್ತು ಇಂಡೋನೇಶ್ಯಾದಲ್ಲಿ 2012-17ರ ನಡುವೆ 80 ಲ.ಜನರು ಬಡತನದಿಂದ ಹೊರಕ್ಕೆ ಬಂದಿದ್ದಾರೆ.

ವಿಶ್ವಸಂಸ್ಥೆಯ ದತ್ತಾಂಶಗಳಂತೆ ಕಳೆದ ಎಪ್ರಿಲ್ ನಲ್ಲಿ ಭಾರತವು 142.86 ಕೋ.ಜನರೊಂದಿಗೆ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆಯ ದೇಶವಾಗಿ ಹೊರಹೊಮ್ಮಿದೆ.

ಬಡತನವನ್ನು ತಗ್ಗಿಸಬಹುದು ಎಂದು ತೋರಿಸಿರುವ ವರದಿಯು, ಆದರೆ ಕೋವಿಡ್ ಸಂದರ್ಭದಲ್ಲಿ ಸಮಗ್ರ ಮಾಹಿತಿಯ ಕೊರತೆಯು ತಕ್ಷಣದ ಭವಿಷ್ಯವನ್ನು ನಿರ್ಧರಿಸುವಲ್ಲಿ ಸವಾಲುಗಳನ್ನು ಒಡ್ಡಿದೆ ಎಂದು ಹೇಳಿದೆ.

2005/2006ರಲ್ಲಿ ಭಾರತದಲ್ಲಿ ಸುಮಾರು 64.5 ಕೋ.ಜನರು ಕಡುಬಡತನದಲ್ಲಿದ್ದು,ಈ ಸಂಖ್ಯೆ 2015/16ರಲ್ಲಿ ಸುಮಾರು 37 ಕೋ.ಗೆ ಮತ್ತು 2019/21ರಲ್ಲಿ 23 ಕೋ.ಗೆ ಇಳಿದಿತ್ತು.

ಅಲ್ಲದೆ,ಭಾರತದಲ್ಲಿ ಎಲ್ಲ ಸೂಚಕಗಳಲ್ಲಿ ಕೊರತೆಯು ಇಳಿಕೆಯಾಗಿದ್ದು ಹಿಂದುಳಿದ ಜಾತಿ ಗುಂಪುಗಳಲ್ಲಿನ ಮಕ್ಕಳು ಮತ್ತು ಜನರು ಸೇರಿದಂತೆ ಅತ್ಯಂತ ಬಡ ರಾಜ್ಯಗಳು ಮತ್ತು ಗುಂಪುಗಳು ತ್ವರಿತವಾಗಿ ಅಭಿವೃದ್ಧಿಗೊಂಡಿವೆ ಎಂದು ವರದಿಯು ಬೆಟ್ಟು ಮಾಡಿದೆ.

ವರದಿಯ ಪ್ರಕಾರ 2005/06ರಲ್ಲಿ ಶೇ.44.3ರಷ್ಟಿದ್ದ ಕಡು ಬಡತನವನ್ನು ಹೊಂದಿದ್ದ ಮತ್ತು ಪೌಷ್ಟಿಕಾಂಶ ಸೂಚಕದಡಿ ವಂಚಿತ ಜನರ ಸಂಖ್ಯೆ 2019/21ರಲ್ಲಿ ಶೇ.11.8ಕ್ಕೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಮಕ್ಕಳ ಮರಣ ಪ್ರಮಾಣವು ಶೇ.4.5ರಿಂದ ಶೇ.1.5ಕ್ಕೆ ಕುಸಿದಿದೆ. ಕುಡಿಯುವ ನೀರಿನ ಸೂಚಕದಡಿ ವಂಚಿತ ಜನರ ಸಂಖ್ಯೆಈ ಅವಧಿಯಲ್ಲಿ ಶೇ.16.4ರಿಂದ ಶೇ.2.7ಕ್ಕೆ ಇಳಿದಿದೆ. ವಿದ್ಯುತ್ ಸಂಪರ್ಕದಿಂದ ವಂಚಿತರಾಗಿದ್ದವರ ಸಂಖ್ಯೆ ಶೇ.29ರಿಂದ ಶೇ.2.1ಕ್ಕೆ ಮತ್ತು ವಸತಿ ಸೌಲಭ್ಯದಿಂದ ವಂಚಿತ ಜನರ ಸಂಖ್ಯೆ ಶೇ.44.9ರಿಂದ ಶೇ.13.6ಕ್ಕೆ ಇಳಿಕೆಯಾಗಿದೆ.

ಒಂದು ಅವಧಿಯಲ್ಲಿ ತಮ್ಮ ಜಾಗತಿಕ ಎಂಪಿಐ ಅನ್ನು ಅರ್ಧಕ್ಕೆ ತಗ್ಗಿಸಿದ 19 ದೇಶಗಳಲ್ಲಿ ಭಾರತವೂ (2005/06ರಿಂದ 2015/16) ಸೇರಿದೆ.

ವರದಿಯು ತಿಳಿಸಿರುವಂತೆ 110 ದೇಶಗಳಲ್ಲಿ 6.1 ಶತಕೋಟಿ ಜನರ ಪೈಕಿ 1.1 ಶತಕೋಟಿ ಜನರು (ಶೇ.18) ಕಡುಬಡತನದಲ್ಲಿ ಬದುಕುತ್ತಿದ್ದಾರೆ. ಪ್ರತಿ ಆರು ಬಡವರ ಪೈಕಿ ಐವರು ಸಬ್-ಸಹಾರನ್ ಆಫ್ರಿಕಾ (53.4 ಕೋ.) ಮತ್ತು ದಕ್ಷಿಣ ಏಶ್ಯಾ (38.9 ಕೋ.) ದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News