ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ 5 ವರ್ಷಗಳಲ್ಲಿ 98 ವಿದ್ಯಾರ್ಥಿಗಳ ಆತ್ಮಹತ್ಯೆ: ಕೇಂದ್ರದಿಂದ ಮಾಹಿತಿ

ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು, ಏಕಾಂಗಿತನ, ನಿಂದನೆ, ಹಿಂಸೆ, ಕೌಟುಂಬಿಕ ಸಮಸ್ಯೆಗಳು ಹಾಗೂ ಮಾನಸಿಕ ಸಮಸ್ಯೆಗಳು ಹೆಚ್ಚಿನ ಆತ್ಮಹತ್ಯೆಗಳಿಗೆ ಕಾರಣವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Update: 2023-07-27 10:16 GMT

ಹೊಸದಿಲ್ಲಿ: ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 98 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಸುಭಾಸ್‌ ಸರ್ಕಾರ್‌ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ರಾಜ್ಯಸಭಾ ಸಂಸದ ವಿ ಶಿವದಾಸನ್‌ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಅವರು ಮೇಲಿನ ಮಾಹಿತಿ ನೀಡಿದ್ದಾರೆ.

ಒಟ್ಟು ಆತ್ಮಹತ್ಯೆಗಳಲ್ಲಿ 39 ಮಂದಿ ಐಐಟಿ ವಿದ್ಯಾರ್ಥಿಗಳಾಗಿದ್ದರೆ, 25 ಮಂದಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ಸ್‌ ಆಫ್‌ ಟೆಕ್ನಾಲಜಿ ಮತ್ತು ಕೇಂದ್ರೀಯ ವಿವಿ ವಿದ್ಯಾರ್ಥಿಗಳಾಗಿದ್ದರು, ನಾಲ್ಕು ಮಂದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್ಮೆಂಟ್‌ ವಿದ್ಯಾರ್ಥಿಗಳಾಗಿದ್ದರೆ, ಮೂರು ಮಂದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್ಸ್‌ ಆಫ್‌ ಸಾಯನ್ಸ್‌ ಎಜುಕೇಶನ್‌ ಎಂಡ್‌ ರಿಸರ್ಚ್‌ ಹಾಗೂ ಇಬ್ಬರು ಇಂಡಿಯನ್‌ ಇನ್‌ಸ್ಟಿಟ್ಯೂಟ್ಸ್‌ ಆಫ್‌ ಇನ್ಫಾರ್ಮೇಶನ್‌ ಟೆಕ್ನಾಲಜಿಯವರಾಗಿದ್ದಾರೆ.

ಸಚಿವರು ನೀಡಿದ ಮಾಹಿತಿಯಂತೆ ಈ ವರ್ಷ ಇಲ್ಲಿಯ ತನಕ 20 ವಿದ್ಯಾರ್ಥಿಗಳು ಆತ್ಮಹತ್ಯೆಗೈದಿದ್ದರೆ, 2022ರಲ್ಲಿ 24 ಮಂದಿ, 2021 ಮತ್ತು 2020 ರಲ್ಲಿ ತಲಾ ಏಳು ಮಂದಿ, 2019ರಲ್ಲಿ 19 ಮಂದಿ ಹಾಗೂ 2018ರಲ್ಲಿ 21 ಮಂದಿ ಆತ್ಮಹತ್ಯೆಗೈದಿದ್ದಾರೆ.

ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು, ಏಕಾಂಗಿತನ, ನಿಂದನೆ, ಹಿಂಸೆ, ಕೌಟುಂಬಿಕ ಸಮಸ್ಯೆಗಳು ಹಾಗೂ ಮಾನಸಿಕ ಸಮಸ್ಯೆಗಳು ಹೆಚ್ಚಿನ ಆತ್ಮಹತ್ಯೆಗಳಿಗೆ ಕಾರಣವಾಗಿದೆ ಎಂದು ಸಚಿವರು ತಿಳಿಸಿದರಲ್ಲದೆ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಮತ್ತು ಯುಜಿಸಿ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸೂಕ್ತ ಸಲಹೆ ಸೂಚನೆಗಳು, ಪ್ರಾದೇಶಿಕ ಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕುಟುಂಬಗಳಿಗೆ ಬೆಂಬಲ ಒದಗಿಸಲು ಸರ್ಕಾರ ಮನೋದರ್ಪಣ್‌ ಎಂ ಕಾರ್ಯಕ್ರಮವನ್ನೂ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News