ಬಿಜೆಪಿಯೊಂದಿಗೆ ಚುನಾವಣಾ ಆಯೋಗ ಶಾಮೀಲು; ಆಪ್ ನಾಯಕ ಸಂಜಯ್ ಸಿಂಗ್ ಆರೋಪ

Update: 2024-12-10 16:45 GMT

ಸಂಜಯ್ ಸಿಂಗ್ | PC : PTI 

ಹೊಸದಿಲ್ಲಿ : ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಶಾಮೀಲಾಗಿದೆ ಎಂದು ಆಮ್ ಆದ್ಮಿ ಪಕ್ಷ (ಆಪ್)ದ ಹಿರಿಯ ನಾಯಕ ಸಂಜಯ್ ಸಿಂಗ್ ಮಂಗಳವಾರ ಆರೋಪಿಸಿದ್ದಾರೆ. ಚುನಾವಣಾ ಆಯೋಗವು ಬಿಜೆಪಿಯ ಸೂಚನೆಯಂತೆ ದಿಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ತೆಗೆದುಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಆರ್.ಕೆ. ಪುರಮ್ ಕ್ಷೇತ್ರದಲ್ಲಿ 3,800 ಮತದಾರರ ಹೆಸರುಗಳನ್ನು ತೆಗೆದುಹಾಕುವಂತೆ ಅರ್ಜಿ ಸಲ್ಲಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಹೇಳಿದರು. ಈ ಹೆಸರುಗಳು ಆಪ್ ಚುನಾವಣೆಗಳನ್ನು ಗೆಲ್ಲುತ್ತಿರುವ ಮತಗಟ್ಟೆಗಳಿಗೆ ಸೇರಿವೆ ಎಂದು ಅವರು ತಿಳಿಸಿದರು.

ದಿಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಹಲವು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂಬುದಾಗಿ ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ಮತ್ತು ಪಕ್ಷದ ಇತರ ನಾಯಕರು ಆರೋಪಿಸುತ್ತಾ ಬಂದಿದ್ದಾರೆ.

‘‘ಆರ್.ಕೆ. ಪುರಮ್ ಕ್ಷೇತ್ರದಲ್ಲಿ, 3,800 ಮತದಾರರ ಹೆಸರುಗಳನ್ನು ತೆಗೆದುಹಾಕುವಂತೆ ಅರ್ಜಿಯೊಂದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎನ್ನುವುದು ನಮಗೆ ಗೊತ್ತಾಗಿದೆ. ನಮ್ಮ ಕಾರ್ಯಕರ್ತರು ಮತ್ತು ಸ್ಥಳೀಯ ಶಾಸಕರು ಈ ಹೆಸರುಗಳನ್ನು ಪರಿಶೀಲಿಸಿದಾಗ, ಅವರ ಪೈಕಿ 1,800 ಮಂದಿ ಈಗಲೂ ಅದೇ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ಅರ್ಹ ಮತದಾರರಾಗಿದ್ದಾರೆ ಎನ್ನುವುದು ಪತ್ತೆಯಾಗಿದೆ’’ ಎಂದು ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘‘ಅರ್ಜಿಯಲ್ಲಿ ಹೆಸರಿಸಲಾಗಿರುವ ಮತದಾರರು, ಹಿಂದಿನ ಚುನಾವಣೆಗಳಲ್ಲಿ ಆಪ್ ಗೆದ್ದಿರುವ ಮತಗಟ್ಟೆಗಳಿಗೆ ಸೇರಿದವರಾಗಿದ್ದಾರೆ’’ ಎಂದು ಅವರು ತಿಳಿಸಿದರು.

ಭಾರತೀಯ ಚುನಾವಣಾ ಆಯೋಗವು ‘‘ಬಿಜೆಪಿಯೊಂದಿಗೆ ಶಾಮೀಲಾಗಿ ಕೆಲಸ ಮಾಡುತ್ತಿದೆ’’ ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News