ದಟ್ಟ ಮಂಜಿನ ಕಾರಣದಿಂದ ಅಪಘಾತ: 12 ಮಂದಿ ಮೃತ್ಯು

Update: 2023-12-26 02:37 GMT

ಹೊಸದಿಲ್ಲಿ: ಹಲವು ರಾಜ್ಯಗಳಲ್ಲಿ ದಟ್ಟ ಮಂಜು ಕವಿದ ಕಾರಣದಿಂದ ವಾಹನ ಚಾಲನೆ ದುಸ್ತರವಾಗಿದೆ. ಮಂಜಿನ ಕಾರಣದಿಂದ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

ತೆಲಂಗಾಣದ ನಲಗೊಂಡ ಜಿಲ್ಲೆಯ ಮಿರ್ಯಲಗುಡ್ಡ ಎಂಬಲ್ಲಿ ಭಾನುವಾರ ರಾತ್ರಿ ಕೆಲವೇ ಗಂಟೆಗಳ ಅಂತರದಲ್ಲಿ ಒಂದೇ ಕುಟುಂಬ ಎರಡು ಅಪಘಾತಗಳಿಗೆ ಸಿಲುಕಿದ್ದು, ಇದಕ್ಕೆ ದಟ್ಟ ಮಂಜು ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

ಕಲ ಗಂಟೆಗಳ ಹಿಂದೆ ಇದೇ ಪ್ರದೇಶದಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಶವಾಗಾರದಿಂದ ಪಡೆಯಲು ಸಾಗುತ್ತಿದ್ದ ಮಿನಿವ್ಯಾನ್, ಲಾರಿಗೆ ಡಿಕ್ಕಿಹೊಡೆದು ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕುಟುಂಬದ ಇತರ ಮೂವರು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಬೈಕ್ ಅಪಘಾತದಲ್ಲಿ ಒಬ್ಬ ಪಾದಚಾರಿ ಕೂಡಾ ಮೃತಪಟ್ಟಿದ್ದು, ಎರಡನೇ ಅಪಘಾತದಲ್ಲಿ ವ್ಯಾನ್‍ ನ ಚಾಲಕ ಕೂಡಾ ಜೀವ ಕಳೆದುಕೊಂಡಿದ್ದಾನೆ.

ಗುಜರಾತ್ ಮೂಲದ ಮೂರು ಮಂದಿ ರಾಜಸ್ಥಾನದಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬರ್ಮಾರ್ ಜಿಲ್ಲೆಯಲ್ಲಿ ಸೋಮವಾರ ಈ ದುರಂತ ನಡೆದಿದೆ. ಉತ್ತರ ಪ್ರದೇಶದ ಝಾನ್ಸಿ- ಕಾನ್ಪುರ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದ ಸಂದರ್ಭ  ನಡೆದ ಸರಣಿ ಅಪಘಾತದಲ್ಲಿ ಮಿನಿಬಸ್ ಮೇಲೆ ಟ್ರಕ್ ಹರಿದು  ಇಬ್ಬರು ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದಾರೆ. ನಿಯಂತ್ರಣ ಕಳೆದುಕೊಂಡ ಈ ಮಿನಿಬಸ್ ಮತ್ತೊಂದು ಟ್ರಕ್‍ಗೆ ಡಿಕ್ಕಿ ಹೊಡೆದಿದೆ.   

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News