4 ವರ್ಷದ ಬಾಲಕಿಯ ಅತ್ಯಾಚಾರವೆಸಗಿದ ಆರೋಪ; ಪೊಲೀಸ್ ಅಧಿಕಾರಿಗೆ ಗ್ರಾಮಸ್ಥರಿಂದ ಥಳಿತ

Update: 2023-11-11 07:56 GMT

ಸಾಂದರ್ಭಿಕ ಚಿತ್ರ

ದೌಸಾ: ನಾಲ್ಕು ವರ್ಷದ ಬಾಲಕಿ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆಯೊಂದರ ಎದುರು ಬೃಹತ್ ಪ್ರತಿಭಟನೆ ನಡೆದಿರುವ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ ಎಂದು ndtv.com ವರದಿ ಮಾಡಿದೆ.

ಚುನಾವಣಾ ಕರ್ತವ್ಯದಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ಭೂಪೇಂದ್ರ ಸಿಂಗ್, ಬಾಲಕಿಗೆ ಆಮಿಷವೊಡ್ಡಿ, ತನ್ನ ಕೋಣೆಗೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಬಜರಂಗ್ ಸಿಂಗ್ ತಿಳಿಸಿದ್ದಾರೆ.

“ಭೂಪೇಂದ್ರ ಸಿಂಗ್ ಎಂದು ಗುರುತಿಸಲಾಗಿರುವ ಸಬ್ ಇನ್ಸ್ ಪೆಕ್ಟರ್ ವಿರುದ್ಧ ಆತನ ಮನೆಯ ಸಮೀಪದಲ್ಲೇ ವಾಸಿಸುತ್ತಿರುವ ಕುಟುಂಬದ ದೂರನ್ನು ಆಧರಿಸಿ ರಹುವಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರು ಆತನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾರೆ. ಅಪ್ರಾಪ್ತ ಬಾಲಕಿಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದ್ದು, ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗುವುದು” ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಹರಡುತ್ತಿದ್ದಂತೆಯೆ ರಹುವಾಸ್ ಪೊಲೀಸ್ ಠಾಣೆಯೆದುರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಗ್ರಾಮಸ್ಥರು, ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಭೂಪೇಂದ್ರ ಸಿಂಗ್ ನನ್ನು ಪೊಲೀಸರ ವಶಕ್ಕೆ ಒಪ್ಪಿಸುವ ಮುನ್ನ ಗ್ರಾಮಸ್ಥರು ಆತನನ್ನು ಥಳಿಸಿದ್ದಾರೆ. 

ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ, “ಲಾಲ್ಸೋತ್ ನಲ್ಲಿ ನಾಲ್ಕು ವರ್ಷದ ದಲಿತ ಬಾಲಕಿಯ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಅತ್ಯಾಚಾರ ನಡೆಸಿರುವ ಘಟನೆಯ ಕುರಿತು ಜನರಲ್ಲಿ ಭಾರಿ ಆಕ್ರೋಶ ಮನೆ ಮಾಡಿದೆ. ಆ ಮುಗ್ಧ ಬಾಲಕಿಗೆ ನ್ಯಾಯ ದೊರಕಿಸಿಕೊಡಲು ನಾನು ಇಲ್ಲಿಗೆ ಬಂದಿದ್ದೇನೆ” ಎಂದು ಹೇಳಿದ್ದಾರೆ.

“ನಾನಿಲ್ಲಿ ಬಾಲಕಿಗೆ ನೆರವು ನೀಡಲು ಬಂದಿದ್ದೇನೆ. ಸಬ್ ಇನ್ಸ್ ಪೆಕ್ಟರ್ ನನ್ನು ಬಂಧಿಸಲಾಗಿದೆ. ಚುನಾವಣೆಗಳು ಮುಂದೆ ಬರುತ್ತಾವಾದರೂ, ನನ್ನ ಮೊದಲ ಆದ್ಯತೆ ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದು. ಇದೊಂದು ನಾಚಿಕೆಗೇಡು ಘಟನೆ” ಎಂದು ಸಂಸದ ಮೀನಾ ಖಂಡಿಸಿದ್ದಾರೆ.

ಇದೇ ವೇಳೆ ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಬಿಜೆಪಿ ಸಂಸದ ರೂ. 50 ಲಕ್ಷ ಪರಿಹಾರವನ್ನು ಘೋಷಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News