ನಟ ಮಿಥುನ್ ಚಕ್ರವರ್ತಿ ಮೊದಲ ಪತ್ನಿ ಹೆಲೆನಾ ಲ್ಯೂಕ್ ನಿಧನ!

Update: 2024-11-04 13:47 GMT

 ಹೆಲೆನಾ ಲ್ಯೂಕ್ | Credit: (Facebook/HelenLuke)

ಮುಂಬೈ : ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಮೊದಲ ಪತ್ನಿ ಹೆಲೆನಾ ಲ್ಯೂಕ್ ಅಮೇರಿಕಾದಲ್ಲಿ ಮೃತಪಟ್ಟಿರುವುದಾಗಿ ಅವರ ಸ್ನೇಹಿತೆ, ಖ್ಯಾತ ನೃತ್ಯಗಾರ್ತಿ ಮತ್ತು ನಟಿ ಕಲ್ಪನಾ ಅಯ್ಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಹೆಲೆನಾ ಸದ್ಯ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಅವರ ಸಾವಿನ ಕುರಿತ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮಿಥುನ್ ರನ್ನು 1979 ರಲ್ಲಿ ವಿವಾಹವಾಗಿದ್ದ ಹೆಲೆನಾ, ಕೇವಲ ನಾಲ್ಕು ತಿಂಗಳಲ್ಲೇ ವಿಚ್ಛೇದನ ಪಡೆದಿದ್ದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಹೆಲೆನಾ ಮಿಥುನ್ ಬಗ್ಗೆ ಮಾತನಾಡುತ್ತಾ ‘ನನ್ನ ನಾಲ್ಕು ತಿಂಗಳ ಮದುವೆ ಜೀವನ ಈಗ ಕನಸೆಂಬಂತೆ ಭಾಸವಾಗುತ್ತಿದೆ, ಮದುವೆ ಆಗದೇ ಇದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸುತ್ತದೆ, ದುರದೃಷ್ಟವಶಾತ್ ನನಗೆ ಬ್ರೈನ್ ವಾಶ್ ಮಾಡಲು ಮಿಥುನ್ ಯಶಸ್ವಿಯಾದರು. ನಾನು ಮದುವೆ ಮುರಿದುಕೊಳ್ಳಲು ಇಚ್ಚಿಸಿದ್ದರಿಂದ ವಿಚ್ಛೇದನ ಕೇಳಿದೆ. ಅವರು ಈ ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಯಾದರೂ, ನಾನು ಅವರ ಬಳಿಗ ಹಿಂತಿರುಗುವುದಿಲ್ಲ. ಆತನ ಬಳಿ ಜೀವನಾಂಶವನ್ನೂ ಕೇಳಲಿಲ್ಲ’ ಎಂದಿದ್ದರು. ಮಿಥುನ್ ಅವರು ಹೆಲೆನಾ ಅವರನ್ನು ಸದಾ ಅನುಮಾನದಿಂದಲೇ ನೋಡುತ್ತಿರು. ಹಳೆಯ ಬಾಯ್ ಫ್ರೆಂಡ್ನ ಭೇಟಿ ಮಾಡಿದ್ದೀಯಾ ಎಂದು ಅವರು ಆರೋಪಿಸುತ್ತಿದ್ದರು ಎನ್ನಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಹೆಲೆನಾ :

ಸದ್ಯ ಅಮೆರಿಕದಲ್ಲಿ ವಾಸಿಸುತ್ತಿದ್ದ ಹೆಲೆನಾ, ಮಿಥುನ್ ಚಕ್ರವರ್ತಿಯಿಂದ ವಿಚ್ಛೇದನ ಪಡೆದ ಅದೇ ವರ್ಷ ಯೋಗಿತಾ ಬಾಲಿರನ್ನು ಮದುವೆಯಾಗಿದ್ದರು. ಈ ದಂಪತಿಗೆ ನಾಲ್ಕು ಜನ ಮಕ್ಕಳಿದ್ದರು. ಹಲವು ದಿನಗಳಿಂದ ಅನಾರೋಗ್ಯದಿಂದ ಹೆಲೆನಾ ಬಳಲುತ್ತಿದ್ದರೂ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಲಿಲ್ಲ ಎಂದು ಹೇಳಲಾಗುತ್ತಿದೆ.

ನಟಿಯಾಗಿ ಹೆಲೆನಾ:

ಹೆಲೆನಾ ಲ್ಯೂಕ್ ತನ್ನ ವೃತ್ತಿಜೀವನದಲ್ಲಿ 9 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮಿತಾಭ್ ಅಭಿನಯದ ‘ಮರ್ದ್’ ಚಿತ್ರದಲ್ಲಿ ಬ್ರಿಟಿಷ್ ರಾಣಿಯ ಪಾತ್ರದಿಂದ ಅವರು ಹೆಚ್ಚು ಜನಪ್ರಿಯರಾದರು. ಇದಲ್ಲದೇ ಹೆಲೆನಾ ‘ಭಾಯ್ ಅಖೀರ್ ಭಾಯ್ ಹೋತಾ ಹೈ’, ‘ಯೇ ನಜಾರಿಯಾನ್’, ‘ರೊಮ್ಯಾನ್ಸ್’, ‘ಸಾಥ್ ಸಾಥ್’, ‘ಜುದಾಯಿ’, ‘ಏಕ್ ನಯಾ ರಿಶ್ತಾ’, ‘ಆವೋ ಪ್ಯಾರ್ ಕರೇನ್’ ಮತ್ತು ‘ದೋ ಗುಲಾಬ್’ ಚಿತ್ರಗಳಲ್ಲಿ ನಟಿಸಿದ್ದಾರೆ. ಅದೇ ಸಮಯದಲ್ಲಿ ಚಿತ್ರರಂಗವನ್ನು ತೊರೆದು ಅಮೆರಿಕಾಕ್ಕೆ ತೆರಳಿದ ಅವರು ಡೆಲ್ಟಾ ಏರ್ಲೈನ್ಸ್ನಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದ್ದರು.


 



ಹೆಲೆನಾ ಕೊನೆಯ ಪೋಸ್ಟ್ ಹಲವು ಚರ್ಚೆಗೆ ಕಾರಣ:

ಹೆಲೆನಾ ಅವರು ಇನ್ಸ್ಟಾಗ್ರಾಮ್ನಲ್ಲಿ ಮಾಡಿರುವ ಕೊನೆಯ ಪೋಸ್ಟ್ ಕೂಡ ಚರ್ಚೆಗೆ ಕಾರಣವಾಗಿದೆ. ‘ಇದು ತುಂಬಾ ವಿಚಿತ್ರ ಅನಿಸುತ್ತಿದೆ. ಅನೇಕ ಭಾವನೆಗಳು ನನ್ನ ಮನಸ್ಸಿನಲ್ಲಿ ಮೂಡುತ್ತಿವೆ, ಇದಕ್ಕೆ ಕಾರಣ ನನಗೆ ತಿಳಿಯುತ್ತಿಲ್ಲ, ದುಃಖವಾಗುತ್ತಿದೆ’ ಎಂದು ಕೊನೆಯದಾಗಿ ಬರೆದುಕೊಂಡಿದ್ದಾರೆ. ಅವರಿಗೆ ಸಾವಿನ ಬಗ್ಗೆ ಮೊದಲೇ ತಿಳಿದಿತ್ತೇ ಅಥವಾ ಇದೊಂದು ಆತ್ಮಹತ್ಯೆಯೇ ಎನ್ನುವ ಪ್ರಶ್ನೆ ಈಗ ಎಲ್ಲರಲ್ಲಿ ಮೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News