ಗೌತಮ್ ಅದಾನಿ ಮತ್ತು ಇತರರ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
ವಾಷಿಂಗ್ಟನ್ : ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಇತರರ ವಿರುದ್ಧದ ಮೂರು ಪ್ರಕರಣಗಳನ್ನು( ಸಿವಿಲ್ ಮತ್ತು ಕ್ರಿಮಿನಲ್) ಜಂಟಿಯಾಗಿ ವಿಚಾರಣೆ ನಡೆಸುವಂತೆ ನ್ಯೂಯಾರ್ಕ್ ಕೋರ್ಟ್ ಆದೇಶಿಸಿದೆ.
ಯುಎಸ್ vs ಅದಾನಿ ಮತ್ತು ಇತರರು(ಕ್ರಿಮಿನಲ್ ಪ್ರಕರಣ), ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್(SEC) vs ಅದಾನಿ ಮತ್ತು ಇತರರು(ಸಿವಿಲ್ ಪ್ರಕರಣ), ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ vs ಅಜ್ಯೂರ್ ಪವರ್ ಗ್ಲೋಬಲ್ ಲಿಮಿಟೆಡ್ ನ ಸಿರಿಲ್ ಕ್ಯಾಬೆನ್ಸ್ ಇತರರ ವಿರುದ್ಧದ ಸಿವಿಲ್ ಪ್ರಕರಣವನ್ನು ಜಂಟಿಯಾಗಿ ತನಿಖೆ ನಡೆಸುವಂತೆ ಯುಎಸ್ ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಂಗದ ದಕ್ಷತೆಯನ್ನು ಹೆಚ್ಚಿಸಲು ಮತ್ತು ಸಂಘರ್ಷಗಳನ್ನು ತಪ್ಪಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅದಾನಿ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಅದಾನಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯ ವಿಚಾರಣೆ ನಡೆಸುತ್ತಿರುವ ಜಿಲ್ಲಾ ನ್ಯಾಯಾಧೀಶ ನಿಕೋಲಸ್ ಜಿ ಗರೌಫಿಸ್ ಅವರಿಗೆ ವಹಿಸಲಾಗಿದೆ.
ವಿದ್ಯುತ್ ವಿತರಣಾ ಕಂಪೆನಿಗಳಿಂದ ಸೌರಶಕ್ತಿ ಒಪ್ಪಂದಗಳನ್ನು ಪಡೆಯಲು ಅದಾನಿ ಮತ್ತು ಇತರರು ಸುಮಾರು 2,029 ಕೋಟಿ ರೂ. ಲಂಚವನ್ನು ಪಾವತಿಸಿದ್ದಾರೆ ಎಂದು ಯುಎಸ್ ಪ್ರಾಸಿಕ್ಯೂಟರ್ ಗಳು ಆರೋಪಿಸಿದ್ದರು. ಅಮೆರಿಕದ ಕೋರ್ಟ್ ಗೆ ಈ ಕುರಿತು ಆರೋಪಪಟ್ಟಿ ಕೂಡ ಸಲ್ಲಿಸಲಾಗಿದ್ದು, ಇದರ ಬೆನ್ನಲ್ಲೇ, ಅವರ ಬಂಧನಕ್ಕೆ ಕೋರ್ಟ್ ವಾರಂಟ್ ಹೊರಡಿಸಿತ್ತು. ಆದರೆ ಅದಾನಿ ಗ್ರೂಪ್ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿ ನಮ್ಮದು ಕಾನೂನು ಪಾಲಿಸುವ ಸಂಸ್ಥೆಯಾಗಿದೆ ಎಂದು ಹೇಳಿತ್ತು.