ಅಶೋಕ ವಿವಿ ವಿದ್ಯಾರ್ಥಿಗಳಿಂದ ಘೋಷಣೆ | ತೀಕ್ಷ್ಣ ಪ್ರತಿಕ್ರಿಯೆ ನೀಡಿದ ವಿವಿ
ಹೊಸದಿಲ್ಲಿ: ಹರ್ಯಾಣದ ಅಶೋಕ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿಗಳು ಜಾತಿವಾದಿ ಘೋಷಣೆಗಳನ್ನು ಕೂಗಿರುವ ವಿಚಾರ ವಿವಾದಕ್ಕೀಡಾಗಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ. ಆ ಬಳಿಕ ವಿವಿ ಆಡಳಿತ ಹೇಳಿಕೆ ಬಿಡುಗಡೆಗೊಳಿಸಿ ಸಂಸ್ಥೆಯು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಚರ್ಚೆಗೆ ಬಹಳ ಮಹತ್ವ ನೀಡುತ್ತದೆ. ಆದರೆ ಅದೇ ಸಮಯ ಪರಸ್ಪರ ಗೌರವಕ್ಕೂ ಬಹಳ ಪ್ರಾಮುಖ್ಯತೆ ನೀಡುತ್ತದೆ ಎಂದು ಹೇಳಿದೆ.
ಕ್ಯಾಂಪಸ್ನ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದಾಗಿಯೂ ವಿವಿ ಆಡಳಿತ ಹೇಳಿದೆ.
“ನಮಗೆ ಜಾತಿ ಗಣತಿ ಬೇಕು” “ಬ್ರಾಹ್ಮಣ-ಬನಿಯಾವಾದ್ ಮುರ್ದಾಬಾದ್” ಎಂಬ ಘೊಷಣೆಗಳನ್ನು ವಿದ್ಯಾರ್ಥಿಗಳು ಕೂಗುತ್ತಿರುವ ವೀಡಿಯೋಗಳು ವೈರಲ್ ಆದ ನಂತರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
“ಯಾವುದೇ ವ್ಯಕ್ತಿ ಅಥವಾ ಗುಂಪಿನ ವಿರುದ್ಧ ದ್ವೇಷದ ಭಾವನೆಗಳನ್ನು ತಾನು ಖಂಡಿಸುವುದಾಗಿ” ವಿವಿ ಹೇಳಿದೆ.
“ಅಭಿವ್ಯಕ್ತಿ ಸ್ವಾತಂತ್ರ್ಯವು ಸೀಮಾತೀತವಲ್ಲ. ಬದಲು ಪರಸ್ಪರರ ಹಕ್ಕುಗಳು ಮತ್ತು ಭಾವನೆಗಳಿಗೆ ಗೌರವ ನೀಡುವ ಉದ್ದೇಶವೂ ಅದರ ಜೊತೆಗಿದೆ. ವ್ಯಕ್ತಿ ಅಥವಾ ಗುಂಪಿನ ಕುರಿತು ಬೆದರಿಕೆಯ, ದ್ವೇಷದ ವಾತಾವರಣ ಮೂಡಿಸುವ ಕ್ರಮಗಳು ಗಂಭೀರ ಅಪರಾಧಗಳಾಗಿವೆ ಮತ್ತು ವಿವಿಯ ಶಿಸ್ತುಕ್ರಮಕ್ಕೆ ಒಳಪಟ್ಟಿದೆ,” ಎಂದು ಹೇಳಿಕೆ ತಿಳಿಸಿದೆ.