ಮುಂಬೈನಿಂದ ಅಮೆರಿಕಾಗೆ ತನ್ನ ಕೊನೆಯ ಪ್ರಯಾಣ ಬೆಳೆಸಿದ ಏರ್ ಇಂಡಿಯಾದ ಬೋಯಿಂಗ್ 747 ವಿಮಾನ | ಗುಡ್ ಬೈ ಚಾಂಪ್ ಎಂದ ಸಾಮಾಜಿಕ ಮಾಧ್ಯಮ
ಮುಂಬೈ: ಸೋಮವಾರ ಬೆಳಗ್ಗೆ 10.47ಕ್ಕೆ ತನ್ನ ಕೊನೆಯ ಬೋಯಿಂಗ್ 747 ವಿಮಾನವನ್ನು ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಮಾಡುವ ಮೂಲಕ ಏರ್ ಇಂಡಿಯಾ ಅದಕ್ಕೆ ಬೀಳ್ಕೊಡುಗೆ ನೀಡಿತು. ಇದರ ಭಾಗವಾಗಿ ವಿಮಾನ ನಿವೃತ್ತಿಯ ವಯಸ್ಸು ತಲುಪಿದಾಗ ಪೈಲಟ್ ರೆಕ್ಕೆಯ ಬದಿಯಿಂದ ಕೈಬೀಸುವ ಮೂಲಕ ಟೇಕಾಫ್ ಮಾಡುವ ವೀಡಿಯೊವನ್ನು ಏರ್ ಇಂಡಿಯಾ ಹಂಚಿಕೊಂಡಿದೆ.
ಈ ವೀಡಿಯೊವನ್ನು ಹಂಚಿಕೊಂಡಿರುವ ಏರ್ ಇಂಡಿಯಾ, “ನಾವಿಂದು ನಮ್ಮ ಮೊತ್ತಮೊದಲ ಆಗಸದ ರಾಣಿಯ ಕೊನೆಯ ಪಯಣಕ್ಕೆ ಬೀಳ್ಕೊಡುಗೆ ನೀಡಿದೆವು. ಬಿ747 ವಿಮಾನ ಮುಂಬೈನಿಂದ ನಿರ್ಗಮಿಸಿತು. ಭವ್ಯವಾದ ವಿಮಾನಗಳ ಯುಗಕ್ಕಾಗಿ ನಿನಗೆ ಧನ್ಯವಾದಗಳು. ನಾವು ನಿನ್ನ ಸಾಂಪ್ರದಾಯಿಕ ಉಪಸ್ಥಿತಿಯಿಂದ ವಂಚಿತರಾಗುತ್ತಿದ್ದೇವೆ” ಎಂದು ವಿದಾಯ ಕೋರಿದೆ.
ಈ ವೀಡಿಯೊಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾವುಕ ಸ್ಪಂದನೆಗೆ ವ್ಯಕ್ತವಾಗಿದ್ದು, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. “ಪಾಶ್ಚಿಮಾತ್ಯ ದೇಶಕ್ಕೆ ನಾನು ಮೊಟ್ಟ ಮೊದಲ ಬಾರಿಗೆ ಪಯಣಿಸಿದ್ದ ವಿಮಾನ ದಿಲ್ಲಿಯಿಂದ ಏರ್ ಇಂಡಿಯಾದ ಬಿ747 ವಿಮಾನವಾಗಿತ್ತು. ಮಧುರವಾದ ನೆನಪುಗಳು. ಬೈ ಬೈ” ಎಂದು ಓರ್ವ ಬಳಕೆದಾರರು ಬರೆದುಕೊಂಡಿದ್ದರೆ, “ಅಪರೂಪದ ಹಾಗೂ ಭಾವುಕ ಕ್ಷಣಗಳು. ಸುದೀರ್ಘ ಕಾಲ ಸೇವೆ ಸಲ್ಲಿಸಿದ ನಿನಗೆ ಗುಡ್ ಬೈ ಚಾಂಪ್. ಆಗಸದ ರಾಣಿಗೆ ಹೃದಯಪೂರ್ವಕ ಬೀಳ್ಕೊಡುಗೆಗಳು” ಎಂದು #Airindians ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಮತ್ತೊಬ್ಬ ಬಳಕೆದಾರರು ವಿದಾಯ ಕೋರಿದ್ದಾರೆ.
1971ರಲ್ಲಿ ಆಗ್ರಾ ಎಂಬ ಹೆಸರಿನ ಬೋಯಿಂಗ್ 747 ವಿಮಾನವನ್ನು ಏರ್ ಇಂಡಿಯಾ ತನ್ನ ಹಾರಾಟಕ್ಕೆ ಸೇರ್ಪಡೆ ಮಾಡಿಕೊಂಡಿತ್ತು. ಈ ವಿಮಾನವು ಮಾರ್ಚ್ 2021ರಲ್ಲಿ ತನ್ನ ಕೊನೆಯ ವಾಣಿಜ್ಯ ಹಾರಾಟವನ್ನು ನಡೆಸಿತ್ತು. ಈ ವಿಮಾನದಲ್ಲಿ 423 ಆಸನಗಳಿದ್ದು, ಅವುಗಳಲ್ಲಿ 12 ಪ್ರಥಮ ದರ್ಜೆ ಆಸನಗಳು, 26 ಬಿಸಿನೆಸ್ ದರ್ಜೆಯ ಆಸನಗಳು ಹಾಗೂ 385 ಎಕಾನಮಿ ದರ್ಜೆಯ ಆಸನಗಳು ಸೇರಿದ್ದವು. ಬೋಯಿಂಗ್ 747 ವಿಮಾನವು ಜನವರಿ 21, 1970ರಲ್ಲಿ ನ್ಯೂಯಾರ್ಕ್ ನಿಂದ ಲಂಡನ್ ಮಾರ್ಗದಲ್ಲಿ ತನ್ನ ಮೊಟ್ಟ ಮೊದಲ ಪ್ರಯಾಣವನ್ನು ಪ್ಯಾನ್ ಆ್ಯಮ್ ಏರ್ ಲೈನ್ ಸಂಸ್ಥೆಯ ಮೂಲಕ ಪ್ರಾರಂಭಿಸಿತ್ತು.