ಲೋಕಸಭೆಯಲ್ಲಿ ತಪ್ಪು ಮಾಹಿತಿ ಆರೋಪ: ಅಮಿತ್ ಶಾ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದ ಕಾಂಗ್ರೆಸ್

Update: 2023-08-10 16:52 GMT

ಅಮಿತ್ ಶಾ.| Photo: ANI

ಹೊಸದಿಲ್ಲಿ: 2008ರಲ್ಲಿನ ಮಹಾರಾಷ್ಟ್ರದ ರೈತ ವಿಧವೆ ಕಲಾವತಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡುವಿನ ಭೇಟಿಯ ಕುರಿತು ಅಮಿತ್ ಶಾ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷವಾದ ಕಾಂಗ್ರೆಸ್ ಗುರುವಾರ ಹಕ್ಕುಚ್ಯುತಿ ನೋಟಿಸ್ ನೀಡಿದೆ ಎಂದು ndtv.com ವರದಿ ಮಾಡಿದೆ.

ಈ ನೋಟಿಸ್ ಅನ್ನು ಕಾಂಗ್ರೆಸ್ ಪಕ್ಷದ ಸಂಸದ ಹಾಗೂ ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ಸಚೇತಕ ಮಣಿಕಂ ಟ್ಯಾಗೋರ್ ಅವರು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಸಲ್ಲಿಸಿದ್ದಾರೆ. “ನಿನ್ನೆ (ಬುಧವಾರ) ಕಲಾವತಿ ಕತೆಯನ್ನು ತಪ್ಪಾಗಿ ಹೇಳಿ, ಲೋಕಸಭೆಯ ದಾರಿ ತಪ್ಪಿಸಿರುವುದಕ್ಕೆ ನಾನು ಅಮಿತ್ ಶಾ ವಿರುದ್ಧ ಗೌರವಾನ್ವಿತ ಲೋಕಸಭಾಧ್ಯಕ್ಷರಿಗೆ ಹಕ್ಕುಚ್ಯುತಿ ನೋಟಿಸ್ ನೀಡಿದ್ದೇನೆ” ಎಂದು ಟ್ಯಾಗೋರ್ ತಮ್ಮ ‘ಎಕ್ಸ್’ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಇದರೊಂದಿಗೆ ಅವರು ನೋಟಿಸ್ ಪ್ರತಿಯನ್ನು ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದ ವಿದರ್ಭ ಜಿಲ್ಲೆಯಲ್ಲಿ ಉಂಟಾಗಿದ್ದ ಕೃಷಿ ಬಿಕ್ಕಟ್ಟಿನ ಕಾರಣಕ್ಕೆ 2008ರಲ್ಲಿ ಕಲಾವತಿ ಬಂಡೂರ್ಕರ್ ಅವರ ಪತಿ ಆತ್ಮಹತ್ಯೆಗೆ ಶರಣಾದ ನಂತರ, ರಾಹುಲ್ ಗಾಂಧಿ ಅವರ ಮನೆಗೆ ಭೇಟಿ ನೀಡಿದ್ದರು. ಅವಿಶ‍್ವಾಸ ನಿರ್ಣಯದ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದ್ದ ಅಮಿತ್ ಶಾ, ಹೇಗೆ ರಾಹುಲ್ ಗಾಂಧಿಯವರ ರಾಜಕೀಯ ಜೀವನವನ್ನು ಮೇಲೆತ್ತಲು 13 ವಿಫಲ ಪ್ರಯತ್ನಗಳನ್ನು ನಡೆಸಲಾಯಿತು ಹಾಗೂ ರಾಹುಲ್ ಗಾಂಧಿ ಹೇಗೆ ಬಡ ಮಹಿಳೆ ಕಲಾವತಿಯ ಕತೆಯನ್ನು ನಿರೂಪಿಸಿದರು ಎಂಬ ಸಂಗತಿಯನ್ನು ಸ್ಮರಿಸಿದ್ದರು.

ಆ ರೈತ ಮಹಿಳೆಗೆ ಮನೆ ದೊರೆಯುವಂತೆ ಹಾಗೂ ಹಲವಾರು ಸರ್ಕಾರಿ ಯೋಜನೆಗಳು ದೊರೆಯುವಂತೆ ಖಾತ್ರಿಗೊಳಿಸಿದ್ದು ಮೋದಿ ಸರ್ಕಾರ ಎಂದು ಅಮಿತ್ ಶಾ ಪ್ರತಿಪಾದಿಸಿದ್ದರು. ಆದರೆ, ಮೋದಿ ಸರ್ಕಾರ ಕಲಾವತಿ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಆ ರೈತ ಮಹಿಳೆಯ ವಿಡಿಯೊವನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ಆ ವಿಡಿಯೊದಲ್ಲಿ ತಾನು ಬಡತನದಿಂದ ಹೊರ ಬರಲು ರಾಹುಲ್ ಗಾಂಧಿ ನೆರವು ನೀಡಿದರು ಎಂದು ರೈತ ಮಹಿಳೆ ಕಲಾವತಿ ಹೇಳಿಕೊಂಡಿದ್ದಾರೆ. ಟ್ಯಾಗೋರ್ ಅವರು ತಮ್ಮ ನೋಟಿಸ್ ನಲ್ಲಿ, ಅಮಿತ್ ಶಾ ಸದನವನ್ನುದ್ದೇಶಿಸಿ ಮಾತನಾಡುವಾಗ ಕರಾರುವಾಕ್ ಹಾಗೂ ಸತ್ಯಾಂಶವುಳ್ಳ ಮಾಹಿತಿಯನ್ನು ಎತ್ತಿ ಹಿಡಿಯದೆ ಸಂಸದೀಯ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News