ಕೇಜ್ರಿವಾಲ್ ಬಂಧನ ಕುರಿತ ನಿಲುವು ಪುನರುಚ್ಚರಿಸಿದ ಅಮೆರಿಕ
ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಸಂಬಂಧಿಸಿದಂತೆ ಅಮೆರಿಕ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಅದನ್ನು ಖಂಡಿಸುವ ಸಲುವಾಗಿ ಅಮೆರಿಕ ರಾಯಭಾರಿಗೆ ಭಾರತ ಸರ್ಕಾರ ಸಮನ್ಸ್ ನೀಡಿದೆ.
ಅಮೆರಿಕದ ರಕ್ಷಣಾ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಬುಧವಾರ ತಮ್ಮ ನಿಲುವನ್ನು ಪುನರುಚ್ಚರಿಸಿ, "ನ್ಯಾಯಸಮ್ಮತ, ಪಾರದರ್ಶಕ ಹಾಗೂ ಸಕಾಲಿಕ ಕಾನೂನು ಕ್ರಮಗಳನ್ನು ವಾಷಿಂಗ್ಟನ್ ಸ್ವಾಗತಿಸುತ್ತದೆ. ಆದರೆ ಅದಕ್ಕೆ ಯಾರೂ ಗುರಿಯಾಗಬಾರದು" ಎನ್ನುವುದು ನಮ್ಮ ನಿಲುವು ಎಂದು ಹೇಳಿದ್ದಾರೆ.
"ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ ಸೇರಿದಂತೆ ಈ ಕ್ರಮಗಳನ್ನು ನಿಕಟವಾಗಿ ನಾವು ಗಮನಿಸುತ್ತಿದ್ದೇವೆ" ಎಂದು ಮಿಲ್ಲರ್ ಸ್ಪಷ್ಟಪಡಿಸಿದರು. ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸಲಾದ ಬಗೆಗೆ ಕೇಳಿದ ಪ್ರಶ್ನೆಗೆ ಕೂಡಾ ಮಿಲ್ಲರ್ ಉತ್ತರಿಸಿದರು.
"ತೆರಿಗೆ ಅಧಿಕಾರಿಗಳು ತಮ್ಮ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಕೂಡಾ ನಮಗೆ ಅರಿವು ಇದೆ. ಇದು ಆ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಪರಿಣಾಮಕಾರಿ ಪ್ರಚಾರಕ್ಕೆ ಸವಾಲಾಗಲಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಇಂಥ ಪ್ರತಿ ವಿಚಾರದಲ್ಲೂ ನಾವು ನ್ಯಾಯಸಮ್ಮತ, ಪಾರದರ್ಶಕ ಹಾಗೂ ಸಕಾಲಿಕ ನಾನೂನು ಕ್ರಮಗಳನ್ನು ಉತ್ತೇಜಿಸುತ್ತೇವೆ" ಎಂದು ವಿವರಿಸಿದರು.
ಆದರೆ ಯಾವುದೇ ಖಾಸಗಿ ರಾಜತಾಂತ್ರಿಕ ಸಂವಾದಗಳು ನಡೆದಿದೆ ಎನ್ನಲಾದ ವರದಿಗಳನ್ನು ಅವರು ನಿರಾಕರಿಸಿದರು.