ಖರೀದಿಸಲು ಕಾಂಗ್ರೆಸ್ ಶಾಸಕರೇನು ಕುರಿ, ಕೋಣಗಳೇ?: ಪ್ರಹ್ಲಾದ್ ಜೋಶಿ ಪ್ರಶ್ನೆ

Update: 2024-11-17 16:09 GMT

ಹುಬ್ಬಳ್ಳಿ: ‘ಖರೀದಿಸಲು ಕಾಂಗ್ರೆಸ್ ಶಾಸಕರೇನು ಕುರಿ, ಕೋಣಗಳೇ?. ಕಾಂಗ್ರೆಸ್ಸಿಗರು ಹೀಗೆ ಹುಚ್ಚಾಗಿ ಮಾತನಾಡುವುದರಿಂದ ಪ್ರಜಾಪ್ರಭುತ್ವದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಸಿಎಂ ಸಿದ್ದರಾಮಯ್ಯ ತಮ್ಮ ಮತ್ತು ತಮ್ಮ ನೇತೃತ್ವದ ಸರಕಾರದ ಮೇಲಿರುವ ಆರೋಪಗಳ ವಿಷಯಾಂತರಕ್ಕೆ ಹೀಗೆಲ್ಲ ಹೇಳುತ್ತಿದ್ದಾರೆ. ಶಾಸಕರ ಸಾರ್ವಜನಿಕ ಬದುಕನ್ನು ಕಲುಷಿತಗೊಳಿಸುವ ಕೆಲಸವನ್ನು ಮುಖ್ಯಮಂತ್ರಿ ಆದವರು ಮಾಡಬಾರದು ಎಂದು ಸಲಹೆ ನೀಡಿದರು.

ಬಿಜೆಪಿ 50 ಕೋಟಿ ರೂ. ಅಮಿಷವೊಡ್ಡಿದೆ ಎಂದು ಒಬ್ಬೇ ಒಬ್ಬ ಕಾಂಗ್ರೆಸ್ ಶಾಸಕನೂ ಹೇಳಿಕೆ ನೀಡಿಲ್ಲ. ಸಿಎಂ ಆದವರು ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ. ಸಿಎಂ, ಮತ್ತವರ ತಂಡದ ಆರೋಪ ನೋಡಿದರೆ ಕಾಂಗ್ರೆಸ್ ಶಾಸಕರನ್ನು ಇವರು ಮಾರುಕಟ್ಟೆಯಲ್ಲಿ ಇಟ್ಟಂತೆ ಕಾಣುತ್ತದೆ. ಮಾರುಕಟ್ಟೆಯಲ್ಲಿ ಸಿಗೋದು ಕುರಿ, ಕೋಣಗಳು ಮಾತ್ರವೇ ಹೊರತು ಶಾಸಕರಲ್ಲ ಎಂದು ವಾಗ್ದಾಳಿ ನಡೆಸಿದರು.

ಒಬ್ಬೊಬ್ಬ ಶಾಸಕರಿಗೆ 50 ಕೋಟಿ ರೂ. ಅಂದರೆ 2,500 ಕೋಟಿ ರೂ.ಆಗುತ್ತದೆ. ಸಿಎಂಗೆ ಸ್ವಲ್ಪವಾದರೂ ಬುದ್ದಿ ಇದೆಯೇ?. ತಮ್ಮ ರಾಜಕಾರಣಕ್ಕಾಗಿ ಮನಸೋ ಇಚ್ಛೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

‘ಬಿಜೆಪಿ ಸರಕಾರದ ಮೇಲೆ ಶೇ.40 ಕಮಿಷನ್ ಸರಕಾರ ಎಂದು ಆರೋಪ ಮಾಡಿದ್ದ ಕಾಂಗ್ರೆಸ್ ಈಗ ಕ್ಷಮೆ ಕೇಳಲಿ. ಕಾಂಗ್ರೆಸ್, ಆರೋಪ ಸುಳ್ಳೆಂದು ಬಿಜೆಪಿ ಅಂದೇ ಹೇಳಿತ್ತು. ಇದೀಗ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ ಎಂಬುದು ಲೋಕಾಯುಕ್ತ ತನಿಖೆಯಿಂದಲೂ ರುಜುವಾತಾಗಿದೆ. ಲೋಕಾಯುಕ್ತ ನ್ಯಾಯಾಲಯ ಇದು ಹುಸಿ ಆರೋಪ ಎಂಬುದನ್ನು ಸ್ಪಷ್ಟಪಡಿಸಿದೆ. ಹಾಗಾಗಿ ಕಾಂಗ್ರೆಸ್ ಸರಕಾರ ಇದಕ್ಕೆ ಕ್ಷಮೆ ಕೇಳಬೇಕು’ ಎಂದು ಜೋಶಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News