ಮಳೆಯ ಪ್ರಕೋಪಕ್ಕೆ ಒಂದೇ ದಿನ 25 ಮಂದಿ ಮೃತ್ಯು
ಹೊಸದಿಲ್ಲಿ: ವ್ಯಾಪಕ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ಉತ್ತರ ಭಾರತದ ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರ್ಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಒಂದೇ ದಿನ 25 ಮಂದಿ ಜೀವ ಕಳೆದುಕೊಂಡಿದ್ದು, ಇದರೊಂದಿಗೆ ಪ್ರಸಕ್ತ ಮುಂಗಾರಿನಲ್ಲಿ ಮಳೆ ಸಂಬಂಧಿ ಅನಾಹುತಗಳಿಗೆ ಬಲಿಯಾದವರ ಸಂಖ್ಯೆ 116ಕ್ಕೇರಿದೆ ಎಂದು ವರದಿಗಳು ತಿಳಿಸಿವೆ.
ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ ಗರಿಷ್ಠ ಅಂದರೆ 13 ಮಂದಿ ಮಳೆ ದುರಂತದಲ್ಲಿ ಮೃತಪಟ್ಟಿದ್ದಾರೆ. ಒಂಬತ್ತು ಮಂದಿ ನೀರಿನಲ್ಲಿ ಮುಳುಗಿ ಸತ್ತಿದ್ದರೆ, ಸಿಡಿಲು, ಹಾವು ಕಡಿತ ಮತ್ತು ಮನೆ ಕುಸಿತದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದ ಎಲ್ಲ 58 ಜಿಲ್ಲೆಗಳಲ್ಲಿ ಗುರುವಾರ ಕೂಡಾ ವ್ಯಾಪಕ ಮಳೆ ನಿರೀಕ್ಷಿಸಲಾಗಿದ್ದು, ಹವಾಮಾನ ಇಲಾಖೆಯ ಅಧಿಕಾರಿಗಳು ಯೆಲ್ಲೋ ಅಲರ್ಟ್ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಾವಿನ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಪರಿಹಾರ ಹಾಗೂ ಅಪಾಯ ಪ್ರದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ 25 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸಿಎಂ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ಆದರೂ ಬಹುತೇಕ ಪ್ರವಾಸಿಗಳು ಸೇರಿ ಸುಮಾರು 300 ಮಂದಿ ಲಹೂಲ್ ಮತ್ತು ಸ್ಪಿತಿ ಜಿಲ್ಲೆಯ ಚಂದ್ರತಾಲ್ ಸರೋವರದ ಬಳಿ 14100 ಅಡಿ ಎತ್ತರದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಇವರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯುವ ಕಾರ್ಯಾಚರಣೆಗೆ ಪ್ರತಿಕೂಲ ಹವಾಮಾನ ಸವಾಲಾಗಿ ಪರಿಣಮಿಸಿದೆ. ಶೂನ್ಯ ಡಿಗ್ರಿ ಉಷ್ಣಾಂಶದಲ್ಲಿ 3-4 ಅಡಿಗಳಷ್ಟು ರಾಶಿ ಬಿದ್ದಿರುವ ಹಿಮದ ನಡುವೆ ರಸ್ತೆ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಸುಮಾರು 12 ಕಿಲೋಮೀಟರ್ ರಸ್ತೆ ಸರಿಪಡಿಸಲಾಗಿದ್ದು, ಇನ್ನೂ 25 ಕಿಲೋಮೀಟರ್ ಆಗಬೇಕಾಗಿದೆ ಎಂದು ಮೂಲಗಳು ಹೇಳಿವೆ.