ಮಣಿಪುರ ಸಿಎಂ ಕುಟುಂಬದ ಮನೆ ಮೇಲೆ ದಾಳಿಗೆ ಯತ್ನ; ಅಶ್ರುವಾಯು ಸಿಡಿಸಿ ಗುಂಪನ್ನು ಚದುರಿಸಿದ ಪೊಲೀಸರು
ಇಂಫಾಲ: ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ಪೂರ್ವಜರಿಗೆ ಸೇರಿದ ಖಾಲಿ ಮನೆಯ ಮೇಲೆ ಉದ್ರಿಕ್ತರ ಗುಂಪು ಯತ್ನಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಕಣಿವೆ ಪ್ರದೇಶದಲ್ಲಿ ಬಿಗಿ ಭದ್ರತೆ ವ್ಯವಸ್ಥೆಗೊಳಿಸಿದ್ದರೂ, ರಾಜ್ಯ ರಾಜಧಾನಿ ಇಂಫಾಲದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಭದ್ರತಾ ಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿ ಗುಂಪನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.
ಮುಖ್ಯಮಂತ್ರಿಗಳ ಕುಟುಂಬದ ಮನೆ ಮೇಲೆ ಗುಂಪು ದಾಳಿ ನಡೆದಿದೆ ಎಂಬ ವದಂತಿಗಳು ಸುಳ್ಳು ಹಾಗೂ ತಪ್ಪು ದಾರಿಗೆ ಎಳೆಯುವಂಥದ್ದು ಎಂದು ಮಣಿಪುರ ಪೊಲೀಸರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಿಂಗ್ ಅವರು ಇಂಫಾಲದ ಕೇಂದ್ರಭಾಗದಲ್ಲಿ ಬಿಗಿ ಭದ್ರತೆ ಇರುವ ಪ್ರತ್ಯೇಕ ಅಧಿಕೃತ ನಿವಾಸದಲ್ಲಿ ವಾಸವಿದ್ದಾರೆ.
"ಇಂಫಾಲದ ಹೀಂಗಾಂಗ್ ಪ್ರದೇಶದಲ್ಲಿರುವ ಮುಖ್ಯಮಂತ್ರಿಯವರ ಪೂರ್ವಜರ ಮನೆ ಮೇಲೆ ಗುಂಪು ದಾಳಿ ನಡೆಸುವ ಪ್ರಯತ್ನ ನಡೆದಿತ್ತು. ಮನೆಯಿಂದ ಸುಮಾರು 100-150 ಮೀಟರ್ ದೂರದಲ್ಲೇ ಭದ್ರತಾ ಪಡೆಗಳು ಈ ಗುಂಪನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ" ಎಂದು ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಮನೆಯಲ್ಲಿ ಯಾರೂ ವಾಸವಿಲ್ಲದಿದ್ದರೂ, ಹಗಲು ರಾತ್ರಿ ಕಾವಲು ವ್ಯವಸ್ಥೆ ಮಾಡಲಾಗಿದೆ. ಎರಡು ಗುಂಪುಗಳಲ್ಲಿ ಜನ ಭಿನ್ನ ದಿಕ್ಕುಗಳಿಂದ ಬಂದು ಮುಖ್ಯಮಂತ್ರಿಯವರ ಪೂರ್ವಜರ ಮನೆ ಸಮೀಪಕ್ಕೆ ಬಂದಿದ್ದರು. ಆದರೆ ಅವರನ್ನು ತಡೆಯಲಾಯಿತು ಎಂದು ವಿವರಿಸಿದ್ದಾರೆ.
ಗುಂಪನ್ನು ಚದುರಿಸಲು ಕ್ಷಿಪ್ರ ಕಾರ್ಯಾಚರಣೆ ಪಡೆ ಪೊಲೀಸರು ಹಲವು ಸುತ್ತುಗಳ ಅಶ್ರುವಾಯು ಶೆಲ್ ಗಳನ್ನು ಸಿಡಿಸಿದರು. ಇಡೀ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವನ್ನು ಅಧಿಕಾರಿಗಳು ಕಡಿತಗೊಳಿಸಿ, ಪ್ರತಿಭಟನಾಕಾರರು ಮುಂದುವರಿಯದಂತೆ ತಡೆದರು. ಮನೆಯ ಬಳಿ ಹೆಚ್ಚುವರಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಯಿತು. ಪಕ್ಕದ ರಸ್ತೆಯಲ್ಲಿ ಪ್ರತಿಭಟನಾಕಾರರು ಟೈರುಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಗಾಯಗಳಾದ ಬಗ್ಗೆ ಅಧಿಕೃತ ವರದಿ ಬಂದಿಲ್ಲವಾದರೂ, ಆ್ಯಂಬುಲೆನ್ಸ್ ಗಳ ಓಡಾಟ ಕಂಡುಬಂತು.