ರಾಜಸ್ಥಾನ ಬಿಜೆಪಿಯ ಎರಡು ಚುನಾವಣಾ ಸಮಿತಿಗಳಿಂದಲೂ ವಸುಂಧರಾ ರಾಜೆ ಔಟ್!
ಹೊಸದಿಲ್ಲಿ: ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಸಿದ್ಧತೆಗಾಗಿ ಬಿಜೆಪಿ ಗುರುವಾರ ಎರಡು ಪ್ರಮುಖ ಚುನಾವಣಾ ಸಮಿತಿಗಳನ್ನು ರಚಿಸಿದ್ದು, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಈ ಎರಡೂ ಸಮಿತಿಗಳಲ್ಲಿ ಸ್ಥಾನ ಪಡೆದಿಲ್ಲ.
ಆ ಬಳಿಕ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಜೈಪುರದಲ್ಲಿ ಚಾಲನೆ ನೀಡಿದ್ದು, ಬಳಿಕ ಕೋರ್ ಕಮಿಟಿ ಸಭೆಯನ್ನೂ ನಡೆಸಲಾಗಿದೆ. ಈ ಎರಡೂ ಕಾರ್ಯಕ್ರಮಗಳಲ್ಲಿ ಕೂಡಾ ವಸುಂಧರಾ ರಾಜೆ ಗೈರುಹಾಜರಾಗಿದ್ದರು. ರಾಜೆ ಹೊರತಾಗಿ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸತೀಶ್ ಪೂನಿಯಾ, ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡಾ ಎರಡೂ ಸಮಿತಿಗಳಲ್ಲಿಲ್ಲ.
ಮಾಜಿ ಸಚಿವ ನಾರಾಯಣ ಪಂಚಾರ್ಯ ಚುನಾವಣಾ ನಿರ್ವಹಣೆ ಸಮಿತಿಯ ಮುಖ್ಯಸ್ಥರಾಗಿದ್ದರೆ, ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್, ಪ್ರದೇಶ ಸಂಕಲ್ಪ ಪಾತ್ರಾ ಸಮಿತಿ ಹೆಸರಿನ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಮುಂದಿನ ವಾರಗಳಲ್ಲಿ ಚುನಾವಣಾ ಪ್ರಚಾರ ಸಮಿತಿಯನ್ನು ಘೋಷಿಸುವ ನಿರೀಕ್ಷೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.
ಉಭಯ ಸಮಿತಿಗಳಲ್ಲಿ ರಾಜೇ ಹೆಸರು ಕೈಬಿಟ್ಟಿರುವ ಬಗ್ಗೆ ಪ್ರಶ್ನಿಸಿದಾಗ, ಈ ಚುನಾವಣೆಯಲ್ಲಿ ಅವರು ಪ್ರಚಾರ ನಡೆಸುತ್ತಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ ನೀಡಿದರು. "ಅವರು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷೆ. ಅವರಿಗೆ ದೊಡ್ಡ ಪಾತ್ರವಿದೆ. ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಅವರು ಚುನಾವಣೆಯಲ್ಲಿ ಪ್ರಚಾರ ಮಾಡುತ್ತಾರೆ. ನಾವು ಅವರನ್ನು ಗೌರವಿಸುತ್ತೇವೆ" ಎಂದು ಹೇಳಿದರು.