ಬಿಜೆಪಿ ಸೇರ್ಪಡೆಯಾಗಿ ಇಲ್ಲವೆ ಇನ್ನೊಂದು ತಿಂಗಳಲ್ಲಿ ಬಂಧನಕ್ಕೀಡಾಗಲು ಸಿದ್ಧರಾಗುವಂತೆ ಸಲಹೆ ಬಂದಿದೆ: ದಿಲ್ಲಿ ಸಚಿವೆ ಅತಿಶಿ ಆರೋಪ

Update: 2024-04-02 06:42 GMT

ಅತಿಶಿ | Photo: X \  @AtishiAAP

ಹೊಸದಿಲ್ಲಿ: ನನಗೆ ನಿಕಟವಾಗಿರುವ ವ್ಯಕ್ತಿಯೊಬ್ಬರು ಬಿಜೆಪಿ ಸೇರ್ಪಡೆಯಾಗಿ ಇಲ್ಲವೆ ಇನ್ನೊಂದು ತಿಂಗಳಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೀಡಾಗಲು ಸಿದ್ಧರಾಗಿರಿ ಎಂದು ಹೇಳಿದ್ದಾರೆ ಎಂದು ಆಪ್ ನಾಯಕಿ ಹಾಗೂ ದಿಲ್ಲಿ ಸಚಿವೆ ಅತಿಶಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನೊಂದಿಗೆ ದಿಲ್ಲಿ ಸಚಿವ ಸೌರಭ್ ಭಾರದ್ವಾಜ್, ಶಾಸಕ ದುರ್ಗೇಶ್ ಪಾಠಕ್ ಹಾಗೂ ರಾಜ್ಯಸಭಾ ಸಂಸದ ರಾಘವ್ ಚಡ್ಡಾರಂಥ ಆಪ್ ನಾಯಕರನ್ನು ಬಂಧಿಸಲಾಗುತ್ತದೆ ಎಂದು ಅತಿಶಿ ಪ್ರತಿಪಾದಿಸಿದರು.

ನನ್ನ ನಿವಾಸದ ಮೇಲೆ ಹಾಗೂ ನನ್ನ ಸಂಬಂಧಿಕರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯವು ಮುಂದಿನ ದಿನಗಳಲ್ಲಿ ದಾಳಿ ನಡೆಸಲಿದೆ ಎಂದು ನನಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

ರವಿವಾರ ರಾಮ್ ಲೀಲಾ ಮೈದಾನದಲ್ಲಿನ ಇಂಡಿಯಾ ಮೈತ್ರಿಕೂಟ ಸಮಾವೇಶದಿಂದ ಬಿಜೆಪಿಯು ಹತಾಶವಾಗಿದ್ದು, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳಿಸಿದ ಕೂಡಲೇ ಆಪ್ ನಲ್ಲಿ ಒಡಕು ಮೂಡುವುದಿಲ್ಲ ಎಂಬುದು ಅದಕ್ಕೆ ಮನದಟ್ಟಾಗಿದೆ ಎಂದು ಅತಿಶಿ ವ್ಯಂಗ್ಯವಾಡಿದರು.

ಸದ್ಯ ರದ್ದುಗೊಂಡಿರುವ ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪದಲ್ಲಿ ಮಾರ್ಚ್ 31ರಂದು ಜಾರಿ ನಿರ್ದೇಶನಾಲಯವು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಬಂಧಿಸಿತ್ತು. ಅವರನ್ನು ನಗರ ನ್ಯಾಯಾಲಯವೊಂದು ಎಪ್ರಿಲ್ 15ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

ಆಪ್ ಶಾಸಕರನ್ನು ಖರೀದಿಸಿ, ಪಕ್ಷವನ್ನು ಒಡೆಯುವ ಮೂಲಕ ದಿಲ್ಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಹುನ್ನಾರವನ್ನು ಬಿಜೆಪಿ ನಡೆಸುತ್ತಿದೆ ಎಂದು ಆಪ್ ಆಪಾದಿಸಿದೆ. ಬಿಜೆಪಿಯನ್ನು ಸೇರ್ಪಡೆಯಾಗಲು ನನಗೆ ರೂ. 25 ಕೋಟಿಯ ಮೊತ್ತದ ಆಮಂತ್ರಣ ನೀಡಲಾಗಿತ್ತು ಎಂದು ಆಪ್ ಶಾಸಕ ಕಿರಾರಿ ರಿತುರಾಜ್ ಝಾ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News