ಮಧ್ಯಪ್ರದೇಶದಲ್ಲಿ ಸಿಂಧಿಯಾ ಬಳಸಿ ಕಾಂಗ್ರೆಸ್‌ ಮಟ್ಟ ಹಾಕಿದ ಬಿಜೆಪಿ

Update: 2023-12-03 13:16 GMT

ಜ್ಯೋತಿರಾದಿತ್ಯ ಸಿಂಧ್ಯಾ | Photo: PTI 

ಭೋಪಾಲ್: 2018ರ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದು, 2020ರಲ್ಲಿ ಅಧಿಕಾರದಿಂದ ಹೊರದೂಡಲ್ಪಟ್ಟಿದ್ದ ಕಾಂಗ್ರೆಸ್, ಈ ಬಾರಿ ಅಧಿಕಾರಕ್ಕೆ ಮರಳಿ ಬರುವ ವಿಶ್ವಾಸ ಹೊಂದಿತ್ತು. ಆದರೆ, ಕಾಂಗ್ರೆಸ್ ಪಕ್ಷದ ಎಲ್ಲ ನಿರೀಕ್ಷೆಗಳನ್ನೂ ಹುಸಿಯಾಗಿಸಿರುವ ಬಿಜೆಪಿ, ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ. ಇತ್ತೀಚಿನ ವರದಿಗಳ ಪ್ರಕಾರ, 230 ಸ್ಥಾನಗಳ ಪೈಕಿ, 161 ಸ್ಥಾನಗಳಲ್ಲಿ ಬಿಜೆಪಿಯು ಮುನ್ನಡೆ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್ ಪಕ್ಷವು ಕೇವಲ 66 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಅಂಕಿ-ಸಂಖ್ಯೆಯ ಪ್ರಕಾರ, 2018ರ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ ಬಿಜೆಪಿಗೆ 52 ಹೆಚ್ಚಳವಾಗಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷವು 48 ಸ್ಥಾನಗಳನ್ನು ಕಳೆದುಕೊಂಡಿದೆ. ಇದರ ಬೆನ್ನಿಗೇ ಮಧ್ಯಪ್ರದೇಶ ಚುನಾವಣಾ ಫಲಿತಾಂಶದ ಮೇಲೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಬೀರಿರುವ ಪರಿಣಾಮದ ಕುರಿತು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಹಾಲಿ ನಾಗರಿಕ ವಿಮಾನ ಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧ್ಯಾ ಅವರು 2020ರಲ್ಲಿ ಕಮಲ್ನಾಥ್ ನೇತೃತ್ವದ ಸರಕಾರದ ವಿರುದ್ಧ ಬಂಡೆದ್ದು ತಮ್ಮ 22 ಬೆಂಬಲಿಗ ಶಾಸಕರೊಂದಿಗೆ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಇದರಿಂದ ಅವರ ಮಾತೃಪಕ್ಷದ ಸರಕಾರವು ಅಲ್ಪಮತಕ್ಕೆ ಕುಸಿದಿತ್ತು.

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 109 ಸ್ಥಾನಗಳನ್ನು ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದದ್ದು ಜ್ಯೋತಿರಾದಿತ್ಯ ಸಿಂಧ್ಯಾರ ಭದ್ರಕೋಟೆಯಾದ ಚಂಬಲ್-ಗ್ವಾಲಿಯರ್ ಪ್ರಾಂತ್ಯದಲ್ಲಿ ಕಾಂಗ್ರೆಸ್ ಪಕ್ಷವು ತೋರಿದ್ದ ಗಮನಾರ್ಹ ಸಾಧನೆಯಿಂದ. ಈ ಪ್ರಾಂತ್ಯದಲ್ಲಿನ 34 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷವೊಂದೇ 26 ಸ್ಥಾನಗಳಲ್ಲಿ ವಿಜಯದ ನಗೆ ಬೀರಿತ್ತು. ಇದಕ್ಕೂ ಮುನ್ನ, 2013 ಹಾಗೂ 2008ರ ಚುನಾವಣೆಯಲ್ಲಿ ಕ್ರಮವಾಗಿ 12 ಮತ್ತು 13 ಸ್ಥಾನಗಳನ್ನು ಮಾತ್ರ ಗೆಲ್ಲಲು ಕಾಂಗ್ರೆಸ್ ಶಕ್ತವಾಗಿತ್ತು. ಇದೇ ಅವಧಿಯಲ್ಲಿ ಬಿಜೆಪಿಯು ಕ್ರಮವಾಗಿ 20 ಹಾಗೂ 16 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

ಆದರೆ, ಗುನಾ ಲೋಕಸಭಾ ಕ್ಷೇತ್ರದ ಸಂಸದರಾದ ಜ್ಯೋತಿರಾದಿತ್ಯ ಸಿಂಧ್ಯಾ ಬಿಜೆಪಿಗೆ ಪಕ್ಷಾಂತರ ಮಾಡಿದ್ದರಿಂದ, ಆಡಳಿತಾರೂಢ ಬಿಜೆಪಿಯು ಐದು ವರ್ಷದ ಹಿಂದೆ ಅನುಭವಿಸಿದ್ದ ನಷ್ಟವನ್ನು ತುಂಬಿಸಿಕೊಳ್ಳಲು ಸಾಧ್ಯವಾಗಿದೆ. ಅದೇ ಕಾರಣಕ್ಕೆ ಚಂಬಲ್-ಗ್ವಾಲಿಯರ್ ಪ್ರಾಂತ್ಯದಲ್ಲಿ ಬಿಜೆಪಿಗೆ ಹೆಚ್ಚು ಲಾಭವಾಗಿರುವಂತೆ ತೋರುತ್ತಿದೆ.

ಚಂಬಲ್-ಗ್ವಾಲಿಯರ್ ಪ್ರಾಂತ್ಯದಲ್ಲಿ ಒಟ್ಟು ಎಂಟು ಜಿಲ್ಲೆಗಳಿದ್ದು, ಗ್ವಾಲಿಯರ್, ಶಿವಪುರಿ, ದಾತಿಯ, ಅಶೋಕ್ನಗರ್ ಹಾಗೂ ಗುನಾ ಜಿಲ್ಲೆಗಳು ಗ್ವಾಲಿಯರ್ ಪ್ರಾಂತ್ಯದಲ್ಲಿದ್ದರೆ, ಉಳಿದ ಮೂರು ಜಿಲ್ಲೆಗಳಾದ ಮೊರೆನಾ, ಭಿಂಡ್ ಹಾಗೂ ಶಿಯೋಪುರ್ ಚಂಬಲ್ ಪ್ರಾಂತ್ಯದಲ್ಲಿವೆ.

ಈ ಎಲ್ಲ ಪ್ರದೇಶಗಳು ಒಂದು ಕಾಲದಲ್ಲಿ ಗ್ವಾಲಿಯರ್ ಸಾಮ್ರಾಜ್ಯದ ಭಾಗವಾಗಿದ್ದವು ಹಾಗೂ ಜ್ಯೋತಿರಾದಿತ್ಯ ಸಿಂಧ್ಯಾ ಆ ರಾಜಮನೆತನಕ್ಕೆ ಸೇರಿದವರಾಗಿದ್ದಾರೆ.

2013ರಲ್ಲಿ 13 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಚಂಬಲ್ ಪ್ರಾಂತ್ಯದಲ್ಲಿ ಕಾಂಗ್ರೆಸ್ ಪಕ್ಷವು ಬರೋಬ್ಬರಿ 10 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಶಿಯೋಪುರ್, ಸಬಲ್ಗಢ್, ಜೌರಾ, ಸುಮಾವಾಲಿ, ಮೊರೆನಾ, ದಿಮಾನಿ, ಅಂಬಾಹ್, ಲಹರ್, ಮೆಹ್ಗಾಂವ್ ಹಾಗೂ ಗೋಹಾಡ್ನಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದರೆ, ವಿಜಯಪುರ್ ಹಾಗೂ ಅಟೇರ್ನಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿತ್ತು. ಭಿಂಡ್ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ಪಿ ಗೆಲುವಿನ ಪತಾಕೆ ಹಾರಿಸಿತ್ತು.

ಆದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರತಿನಿಧಿಸುತ್ತಿದ್ದ ಕನಿಷ್ಠ ಮೂರು ವಿಧಾನಸಭಾ ಕ್ಷೇತ್ರಗಳಾದ ಸಬಲ್ಗಢ್, ಲಹರ್ ಹಾಗೂ ಮೆಹ್ಗಾಂವ್ ಅನ್ನು ಬಿಜೆಪಿ ಕಿತ್ತುಕೊಂಡಿದ್ದರೆ, ಸುಮನ್ವಾಲಿ ಮತ್ತು ದಿಮಾನಿ ಕ್ಷೇತ್ರಗಳನ್ನು ಬಿಎಸ್ಪಿ ಕಬಳಿಸಿದೆ. ಮತ್ತೊಂದೆಡೆ ಬಿಜೆಪಿಯ ಹಿಡಿತದಲ್ಲಿದ್ದ ಅಟೇರ್ ಹಾಗೂ ವಿಜಯಪುರ್ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದರೆ, ಬಿಎಸ್ಪಿ ಪ್ರತಿನಿಧಿಸುತ್ತಿದ್ದ ಭಿಂಡ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಸಾಧ್ಯತೆಗಳು ಗೋಚರಿಸುತ್ತಿವೆ.

ಗ್ವಾಲಿಯರ್ ಪ್ರಾಂತ್ಯದಲ್ಲಿ ಒಟ್ಟು 21 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ 2002ರಿಂದ 2014ರವರೆಗೆ ಜ್ಯೋತಿರಾದಿತ್ಯ ಸಿಂಧ್ಯಾ ಪ್ರತಿನಿಧಿಸಿದ್ದ ಗುನಾ ಲೋಕಸಭಾ ಕ್ಷೇತ್ರದ ನಾಲ್ಕು ವಿಧಾನಸಭಾ ಕ್ಷೇತ್ರಗಳು ಸೇರಿವೆ. ಗುನಾ ಲೋಕಸಭಾ ಕ್ಷೇತ್ರವು ಜ್ಯೋತಿರಾದಿತ್ಯ ಸಿಂಧ್ಯಾರ ಭದ್ರಕೋಟೆಯಾಗಿದ್ದು, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಕೃಷ್ಣ ಪಾಲ್ ಯಾದವ್ ಅವರು ಈ ಕ್ಷೇತ್ರವನ್ನು ಕಸಿದುಕೊಳ್ಳುವವರೆಗೂ 1971ರಿಂದ ಈ ಕ್ಷೇತ್ರವು ಸಿಂಧ್ಯಾ ಕುಟುಂಬದ ಸದಸ್ಯರ ಹಿಡಿತದಲ್ಲೇ ಇತ್ತು.

2018ರ ಚುನಾವಣೆಯಲ್ಲಿ ಈ ಪ್ರಾಂತ್ಯದ ಐದು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿತ್ತು. ಗುನಾ ಜಿಲ್ಲೆಯಲ್ಲಿ ಗುನಾ ವಿಧಾನಸಭಾ ಕ್ಷೇತ್ರ, ಶಿವಪುರಿ ಜಿಲ್ಲೆಯಲ್ಲಿ ಕೊಲಾರಸ್ ಹಾಗೂ ಶಿವಪುರಿ ವಿಧಾನಸಭಾ ಕ್ಷೇತ್ರ, ದಾತಿಯಾ ಜಿಲ್ಲೆಯಲ್ಲಿ ದಾತಿಯಾ ವಿಧಾನಸಭಾ ಕ್ಷೇತ್ರ ಹಾಗೂ ಗ್ವಾಲಿಯರ್ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆಲುವಿನ ನಗೆ ಬೀರಿತ್ತು.

ಐದು ವರ್ಷಗಳ ನಂತರ, ಜ್ಯೋತಿರಾದಿತ್ಯ ಸಿಂಧ್ಯಾ ಇದೀಗ ಕೇಸರಿ ಪಾಳೆಯದೊಂದಿಗೆ ದೃಢವಾಗಿ ನಿಂತಿರುವುದರಿಂದ, ಕೇಸರಿ ಪಕ್ಷವು ಗ್ವಾಲಿಯರ್ ಪ್ರಾಂತ್ಯದಲ್ಲಿ ಬಹುತೇಕ ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆಗಳು ಗೋಚರಿಸುತ್ತಿವೆ. ಬಿಜೆಪಿಯು ಗ್ವಾಲಿಯರ್ ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ತನ್ನ ಬಳಿಯೇ ಉಳಿಸಿಕೊಳ್ಳುವ ಸಾಧ್ಯತೆ ಇದ್ದು, ಪೂರ್ವ ಗ್ವಾಲಿಯರ್, ದಕ್ಷಿಣ ಗ್ವಾಲಿಯರ್ ವಿಧಾನಸಭಾ ಕ್ಷೇತ್ರಗಳೊಂದಿಗೆ ಗ್ವಾಲಿಯರ್ ನಗರ ಹಾಗೂ ಭಿಟರ್ವಾರ್ ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಂತೆ ಕಾಣುತ್ತಿದೆ. ದಾಬ್ರಾ ವಿಧಾನಸಭಾ ಕ್ಷೇತ್ರ ಮಾತ್ರ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿ ಉಳಿಯುವಂತೆ ತೋರುತ್ತಿದೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ದಾತಿಯಾ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಸ್ಯೂಡಾ ಹಾಗೂ ಭಂದರ್ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ದಾತಿಯಾ ನಗರ ವಿಧಾನಸಭಾ ಕ್ಷೇತ್ರವು ಬಿಜೆಪಿ ಪಾಲಾಗಿತ್ತು. ಇದೀಗ, ಬಿಜೆಪಿ ಪಕ್ಷವು ಸ್ಯೂಡಾ ಕ್ಷೇತ್ರವನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಹೀಗಿದ್ದೂ, ಬಿಜೆಪಿಯು ಇನ್ನುಳಿದ ಎರಡು ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಶಿವಪುರಿ ಜಿಲ್ಲೆಯ ಕರೇರಾ, ಪೋಹರಿ ಹಾಗೂ ಪಿಚ್ಚೋರ್ ವಿಧಾನಸಭಾ ಕ್ಷೇತ್ರಗಳನ್ನು ಜಯಿಸಿತ್ತು. ಉಳಿದ ಶಿವಪುರಿ ಪಟ್ಟಣ ಹಾಗೂ ಕೊಲಾರಸ್ ವಿಧಾನಸಭಾ ಕ್ಷೇತ್ರಗಳು ಬಿಜೆಪಿಯ ಪಾಲಾಗಿದ್ದವು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕರೇರಾ ಹಾಗೂ ಪೋಹರಿ ವಿಧಾನಸಭಾ ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳುವಂತೆ ತೋರುತ್ತಿದೆ.

ಕಾಂಗ್ರೆಸ್ ಹಿಡಿತದಲ್ಲಿದ್ದ ಪಿಚ್ಚೋರ್ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಶಿವಪುರಿ ಹಾಗೂ ಕೊಲಾರಸ್ ವಿಧಾನಸಭಾ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಸನಿಹದಲ್ಲಿದೆ.

ಗುನಾ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಈ ಬಾರಿ ಬಮೋರಿ ಹಾಗೂ ರಘೋಗಢ್ ವಿಧಾನಸಭಾ ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳಲಿದ್ದು, ಚಚೌರಾ ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಳ್ಳಲಿದೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಶೋಕ್ನಗರ ಜಿಲ್ಲೆಯಲ್ಲಿ 3-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಚಂಡೇರಿ ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ದು, ಮುಂಗೌಲಿ ಹಾಗೂ ಅಶೋಕ್ನಗರ್ ವಿಧಾನಸಭಾ ಕ್ಷೇತ್ರಗಳನ್ನು ತನ್ನ ಬಳಿಯೇ ಉಳಿಸಿಕೊಳ್ಳಲಿದೆ.

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಶೇ. 10ಕ್ಕಿಂತಲೂ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಚಂಬಲ್-ಗ್ವಾಲಿಯರ್ ಪ್ರಾಂತ್ಯವು ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಲೇ ಬರುತ್ತಿದೆ. ಈ ಪ್ರಾಂತ್ಯದಲ್ಲಿ ಯಾವ ಪಕ್ಷ ಮುನ್ನಡೆ ಸಾಧಿಸುತ್ತದೊ, ಅದೇ ಪಕ್ಷ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂಬ ಮಾತು ಜನಜನಿತವಾಗಿದೆ.

ಇದರ ಹೊರತಾಗಿಯೂ ರಾಜ್ಯದಲ್ಲಿ ಇನ್ನೂ 196 ಕ್ಷೇತ್ರಗಳು ಬಾಕಿ ಉಳಿಯುತ್ತವಾದರೂ, ಐದು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ನೀಡಿದ್ದ ಮಾಲ್ವಾ ಪ್ರಾಂತ್ಯವನ್ನೂ ನಿರ್ಣಾಯಕ ಎಂದೇ ಪರಿಗಣಿಸಲಾಗಿದೆ. ಮಾಲ್ವಾ ಪ್ರಾಂತ್ಯದಲ್ಲಿ ಒಟ್ಟು 88 ಸ್ಥಾನಗಳಿದ್ದು, 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 45 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿಯು 40 ಕ್ಷೇತ್ರಗಳಿಗೆ ತೃಪ್ತಿ ಪಟ್ಟುಕೊಂಡಿತ್ತು.

ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯು 65 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಚುನಾವಣೆಯಲ್ಲಿ ಬಿಜೆಪಿಯು ದೊಡ್ಡ ವಿಜಯ ಸಾಧಿಸುವ ಸುಳಿವು ದೊರೆಯುತ್ತಿದ್ದಂತೆಯೇ ತಮ್ಮ ಪ್ರಥಮ ಪ್ರತಿಕ್ರಿಯೆ ನೀಡಿದ ಜ್ಯೋತಿರಾದಿತ್ಯ ಸಿಂಧ್ಯಾ, "ಕೆಲವರು ನನ್ನ ಎತ್ತರದ ಕುರಿತು ಮಾತನಾಡಿದ್ದರು. ಆದರೆ, ಗ್ವಾಲಿಯರ್-ಮಾಲ್ವಾದ ಜನರು ತಾವು ಎಷ್ಟು ಎತ್ತರದವರು ಎಂದು ತೋರಿಸಿದ್ದಾರೆ" ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರ ಹೆಸರನ್ನು ಉಲ್ಲೇಖಿಸದೆಯೇ ತಿರುಗೇಟು ನೀಡಿದ್ದಾರೆ. ಇದಕ್ಕೂ ಮುನ್ನ, ಚುನಾವಣಾ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ, ಜ್ಯೋತಿರಾದಿತ್ಯ ಸಿಂಧ್ಯಾರ ಎತ್ತರದ ಕುರಿತು ಅಣಕವಾಡಿದ್ದರು.

ಒಟ್ಟಾರೆಯಾಗಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಬಿಗಿ ಹಿಡಿತ ಹೊಂದಿರುವ ಚಂಬಲ್-ಗ್ವಾಲಿಯರ್ ಹಾಗೂ ಮಾಲ್ವಾ ಪ್ರಾಂತ್ಯಗಳು ಕಾಂಗ್ರೆಸ್ ಪಕ್ಷಕ್ಕೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಆ ಮೂಲಕ ತಮ್ಮ ಬದ್ಧ ವೈರಿ ಹಾಗೂ ಮಾಜಿ ಸಹೋದ್ಯೋಗಿ ಕಮಲ್ನಾಥ್ ವಿರುದ್ಧ ಜ್ಯೋತಿರಾದಿತ್ಯ ಸಿಂಧ್ಯಾ

ಸಿಹಿಯಾದ ಸೇಡು ತೀರಿಸಿಕೊಂಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News