ಪಿಲಿಭೀತ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಣೆ: ಕ್ಷೇತ್ರದ ಜನರಿಗೆ ಭಾವನಾತ್ಮಕ ಪತ್ರ ಬರೆದ ವರುಣ್ ಗಾಂಧಿ

Update: 2024-03-28 14:03 GMT

ವರುಣ್ ಗಾಂಧಿ | Photo : ANI 

ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪಿಲಿಭೀತ್ ಲೋಕಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಲ್ಪಟ್ಟಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ತಮ್ಮ ಕ್ಷೇತ್ರದ ಜನರಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದು, ಅವರು ಆ ಕ್ಷೇತ್ರಕ್ಕೆ ಬಾಲ್ಯದಲ್ಲಿ ಕಾಲಿಟ್ಟಾಗಿನಿಂದ ಇಲ್ಲಿಯವರೆಗಿನ ಸಂತಸಮಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಫಿಲ್ಪಿಟ್ ಲೋಕಸಭಾ ಕ್ಷೇತ್ರವು ಕೇವಲ ತನ್ನ ಕಾರ್ಯಕ್ಷೇತ್ರ ಮಾತ್ರವಾಗಿರದೆ, ಅದು ಹೇಗೆ ನನ್ನ ಗುರುತನ್ನು ವೃದ್ಧಿಸಿತು ಹಾಗೂ ನನ್ನ ಜೀವನ ಪಯಣದಲ್ಲಿ ಅಲ್ಲಿನ ಜನರು ಹೇಗೆ ನನ್ನ ಜೀವನದ ಅವಿಭಾಜ್ಯ ಅಂಗವಾದರು ಎಂಬ ಕುರಿತೂ ಅವರು ಪ್ರತಿಫಲಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವರುಣ್ ಗಾಂಧಿ, “ಇಂದು ನಾನು ಈ ಪತ್ರ ಬರೆಯುತ್ತಿದ್ದು, ಲೆಕ್ಕಕ್ಕಿಡಲಾಗದಷ್ಟು ನೆನಪುಗಳು ನನ್ನನ್ನು ಭಾವುಕನನ್ನಾಗಿಸಿದೆ. ನಾನು ಮೂರು ವರ್ಷದ ಮಗುವಾಗಿದ್ದಾಗ ನನ್ನ ತಾಯಿಯ ಬೆರಳುಗಳನ್ನು ಹಿಡಿದುಕೊಂಡು ಈ ನೆಲಕ್ಕೆ ಕಾಲಿಟ್ಟಿದ್ದು ನೆನಪಿದೆ. ನನಗೆ ಹೇಗೆ ಗೊತ್ತಾಗಬೇಕಿತ್ತು ನನ್ನ ಪಾಲಿಗೆ ಈ ನೆಲವು ನನ್ನ ಕಾರ್ಯಕ್ಷೇತ್ರವಾಗಲಿದೆ ಹಾಗೂ ಇಲ್ಲಿನ ಜನರು ನನ್ನ ಕುಟುಂಬದ ಸದಸ್ಯರಾಗಲಿದ್ದಾರೆ ಎಂದು?” ಎಂದು ಅವರು ಬರೆದುಕೊಂಡಿದ್ದಾರೆ.

“ಹಲವಾರು ವರ್ಷಗಳ ಕಾಲ ಫಿಲ್ಬಿಟ್ ಲೋಕಸಭಾ ಕ್ಷೇತ್ರದ ಜನರಿಗೆ ಸೇವೆ ಸಲ್ಲಿಸುವ ಅವಕಾಶ ದೊರೆತದ್ದು ನನ್ನ ಪುಣ್ಯ” ಎಂದೂ ಅವರು ಹೇಳಿಕೊಂಡಿದ್ದಾರೆ.

ನಾನು ಮತದಾರರಿಂದ ಬೆಲೆ ಕಟ್ಟಲಾಗದ ಸಿದ್ಧಾಂತಗಳು, ಸರಳತೆ ಹಾಗೂ ಕಾರುಣ್ಯದ ಪಾಠಗಳನ್ನು ಕಲಿತೆ. ಇವು ನನ್ನನ್ನು ಕೇವಲ ಸಂಸದನನ್ನಾಗಿ ಮಾತ್ರ ರೂಪಿಸದೆ, ನನ್ನ ವೈಯಕ್ತಿಕ ಬೆಳವಣಿಗೆಯಲ್ಲೂ ಪಾತ್ರ ವಹಿಸಿದವು ಎಂದೂ ಅವರು ಸ್ಮರಿಸಿದ್ದಾರೆ.

ಟಿಕೆಟ್ ದೊರೆಯದ ಹೊರತಾಗಿಯೂ ನಾನು ಸಮುದಾಯದ ಸೇವೆ ಮಾಡುವುದನ್ನು ಮುಂದುವರಿಸಲಿದ್ದೇನೆ ಎಂದು ವರುಣ್ ಗಾಂಧಿ ಭರವಸೆ ನೀಡಿದ್ದಾರೆ.

“ಸಂಸದನಾಗಿಯಲ್ಲದಿದ್ದರೂ, ಓರ್ವ ಪುತ್ರನಾಗಿ ನಾನು ನನ್ನ ಜೀವನಪರ್ಯಂತ ಸೇವೆ ಸಲ್ಲಿಸಲು ಬದ್ಧನಾಗಿದ್ದೇನೆ ಹಾಗೂ ಈ ಹಿಂದಿನಂತೆಯೇ ನನ್ನ ಮನೆಯ ಬಾಗಿಲು ನಿಮಗೆ ಮುಕ್ತವಾಗಿರಲಿದೆ” ಎಂದು ಅವರು ಆಶ್ವಾಸನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News