ಬ್ರಿಜ್ ಭೂಷಣ್ ಲೈಂಗಿಕ ಕಿರುಕುಳ ನೀಡಿದ್ದು ಹೌದು, ಅವರು ಶಿಕ್ಷೆಗೆ ಅರ್ಹರು: ದಿಲ್ಲಿ ಪೊಲೀಸರು

Update: 2023-07-11 11:16 GMT

ಬ್ರಿಜ್ ಭೂಷಣ್ ಶರಣ ಸಿಂಗ್ (Photo: PTI)

ಹೊಸದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ)ದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ ಸಿಂಗ್ ಅವರ ವಿರುದ್ಧ ಮೊದಲ ಸ್ಪಷ್ಟ ದೋಷಾರೋಪಣೆಯಲ್ಲಿ ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ,ಆರು ಅಗ್ರ ಕುಸ್ತಿಪಟುಗಳು ಸಲ್ಲಿಸಿದ ದೂರುಗಳ ಕುರಿತು ಈವರೆಗಿನ ತನಿಖೆಯ ಆಧಾರದಲ್ಲಿ ಲೈಂಗಿಕ ಕಿರುಕುಳ ಮತ್ತು ಹಿಂಬಾಲಿಸುವಿಕೆ ಅಪರಾಧಗಳಿಗಾಗಿ ಕಾನೂನು ಕ್ರಮಕ್ಕೊಳಪಡಲು ಮತ್ತು ದಂಡನೆಗೆ ಸಿಂಗ್ ಬಾಧ್ಯರಾಗಿದ್ದಾರೆ ಎಂದು ಹೇಳಿದ್ದಾರೆ ಎಂದು indianexpress.com ವರದಿ ಮಾಡಿದೆ.

ಜೂನ್ 13ರ ದೋಷಾರೋಪ ಪಟ್ಟಿಯಲ್ಲಿ ಸಿಂಗ್ ವಿರುದ್ಧ ಐಪಿಸಿಯ ಕಲಂ 506 (ಕ್ರಿಮಿನಲ್ ಬೆದರಿಕೆ),ಕಲಂ 354 (ಮಹಿಳೆಯ ಘನತೆಗೆ ಧಕ್ಕೆ),354ಎ (ಲೈಂಗಿಕ ಕಿರುಕುಳ) ಮತ್ತು 354ಡಿ (ಹಿಂಬಾಲಿಸುವಿಕೆ) ಅಡಿ ಆರೋಪಗಳನ್ನು ಹೊರಿಸಿರುವ ದಿಲ್ಲಿ ಪೊಲೀಸರು,ಒಂದು ಪ್ರಕರಣದಲ್ಲಿ ಸಿಂಗ್ ಕಿರುಕುಳವು ಪುನರಾವರ್ತನೆಗೊಂಡಿತ್ತು ಮತ್ತು ಮುಂದುವರಿದಿತ್ತು ಎಂದು ಬೆಟ್ಟು ಮಾಡಿದ್ದಾರೆ.

ಆರು ಪ್ರಕರಣಗಳ ಪೈಕಿ ಎರಡನ್ನು 354,354ಎ ಮತ್ತು 354ಡಿ ಹಾಗೂ ನಾಲ್ಕು ಪ್ರಕರಣಗಳನ್ನು 354 ಮತ್ತು 354ಎ ಕಲಮ್ಗಳಡಿ ದಾಖಲಿಸಲಾಗಿದೆ. ಈ ಅಪರಾಧಗಳಿಗಾಗಿ ಐದು ವರ್ಷಗಳವರೆಗೆ ಜೈಲುಶಿಕ್ಷೆಯನ್ನು ವಿಧಿಸಬಹುದಾಗಿದೆ.

ಸಿಂಗ್ ಮತ್ತು ಸಾಕ್ಷಿಗಳಿಗೆ ಸಮನ್ಸ್ ನೀಡುವಂತೆ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ನ್ಯಾಯಾಲಯವನ್ನು ಕೋರಿಕೊಂಡಿದ್ದಾರೆ.

ತನಿಖಾಧಿಕಾರಿಗಳು 108 ಸಾಕ್ಷಿಗಳ ವಿಚಾರಣೆ ನಡೆಸಿದ್ದು,ಈ ಪೈಕಿ ಕುಸ್ತಿಪಟುಗಳು,ಕೋಚ್ಗಳು ಮತ್ತು ರೆಫರಿಗಳು ಸೇರಿದಂತೆ 15 ಜನರು ಸಂತ್ರಸ್ತ ಕುಸ್ತಿಪಟುಗಳು ಮಾಡಿರುವ ಆರೋಪಗಳನ್ನು ದೃಢೀಕರಿಸಿದ್ದಾರೆ.

ಸಿಂಗ್ ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ, ಆದರೆ ದೋಷಾರೋಪ ಪಟ್ಟಿಗೆ ಲಗತ್ತಿಸಿರುವ ಅನುಬಂಧದಂತೆ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಸಿಂಗ್ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ ಹಾಗೂ ತಾನೆಂದೂ ಕುಸ್ತಿಪಟುಗಳನ್ನು ಭೇಟಿಯಾಗಿರಲಿಲ್ಲ ಮತ್ತು ಅವರ ದೂರವಾಣಿ ಸಂಖ್ಯೆಗಳೂ ತನ್ನ ಬಳಿಯಲ್ಲಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಕುಸ್ತಿಪಟುಗಳು ತಮ್ಮ ದೂರುಗಳಲ್ಲಿ ಲೈಂಗಿಕ ಕಿರುಕುಳದ 15 ಘಟನೆಗಳನ್ನು ಆರೋಪಿಸಿದ್ದಾರೆ. ಇವುಗಳಲ್ಲಿ ಅನುಚಿತ ಸ್ಪರ್ಶದ 10 ಘಟನೆಗಳು,ಹಿಂಬಾಲಿಸುವಿಕೆ ಸೇರಿದಂತೆ ಬೆದರಿಕೆಯ ಹಲವು ಘಟನೆಗಳು ಒಳಗೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News