ತ್ರಿಪುರಾ ರಾಜಧಾನಿ ಅಗರ್ತಲಾಗೆ ಬಂದಿಳಿದ ಶೇಖ್ ಹಸೀನಾ: ವರದಿ
ಹೊಸದಿಲ್ಲಿ: ಮೀಸಲಾತಿ ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನಗೈದಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಹೊತ್ತೊಯ್ದ ಮಿಲಿಟರಿ ಹೆಲಿಕಾಪ್ಟರ್ ಇಂದು ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ ಬಂದಿಳಿದಿದೆ ಎಂದು ತಿಳಿದು ಬಂದಿದೆ. ಶೇಖ್ ಹಸೀನಾ ಜೊತೆಗೆ ಅವರ ಸಹೋದರಿಯೂ ಇದ್ದಾರೆಂದು ತಿಳಿದು ಬಂದಿದೆ.
ಭಾರತದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) 4,096 ಕಿಮೀ ಉದ್ದಕ್ಕೆ ಹರಡಿರುವ ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ “ಹೈ ಅಲರ್ಟ್ʼ ಘೋಷಿಸಿದೆ.
ಬಿಎಸ್‌ಎಫ್ ಡಿಜಿ ದಲ್ಜಿತ್ ಸಿಂಗ್ ಚೌಧುರಿ ಮತ್ತು ಹಿರಿಯ ಅಧಿಕಾರಿಗಳು ಕೊಲ್ಕತ್ತಾಗೆ ಆಗಮಿಸಿದ್ದು ಭಾರತ-ಬಾಂಗ್ಲಾ ಗಡಿಯಲ್ಲಿನ ಪರಿಸ್ಥಿತಿಯನ್ನು ಪರಾಮರ್ಶಿಸಲಿದ್ದಾರೆ.
ಬಾಂಗ್ಲಾದೇಶದಲ್ಲಿ ಇಂದು ಆಡಳಿತವನ್ನು ಮಿಲಿಟರಿ ತನ್ನ ಕೈಗೆ ತೆಗೆದುಕೊಂಡಿದ್ದು ದೇಶದಲ್ಲಿ ಮೂರು ದಿನಗಳ ರಜೆಯನ್ನು ಘೋಷಿಸಲಾಗಿದ್ದು ನ್ಯಾಯಾಲಯಗಳ ಅನಿರ್ದಿಷ್ಟಾವಧಿ ಮುಚ್ಚುಗಡೆಗೂ ಆದೇಶಿಸಲಾಗಿದೆ.
ಮೊಬೈಲ್ ಇಂಟರ್ನೆಟ್ ಸೇವೆಗಳೂ ಸ್ಥಗಿತಗೊಂಡಿವೆ. ಈಗಾಗಲೇ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ಅಲ್ಲಿ ನಿರ್ಬಂಧಿಸಲಾಗಿದೆ.
ಸದ್ಯಕ್ಕೆ ಬಾಂಗ್ಲಾದೇಶಕ್ಕೆ ಭೇಟಿ ಕೊಡುವುದರಿಂದ ದೂರ ಉಳಿಯಬೇಕೆಂದು ಭಾರತ ಸರ್ಕಾರ ತನ್ನ ನಾಗರಿಕರಿಗೆ ಸೂಚಿಸಿದೆ.