ಭಾರತದಲ್ಲಿ ಬುಲ್ಡೋಝರ್ ರಾಜ್ | 2 ವರ್ಷಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಮನೆಗಳು ನೆಲಸಮ!

Update: 2024-07-13 13:56 GMT

ಜೂನ್ 10, 2024 ರಂದು ಉತ್ತರಪ್ರದೇಶದ ಲಕ್ನೋದ ಅಕ್ಬರ್‌ನಗರದಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳನ್ನು ಮತ್ತು ನೂರು ವಾಣಿಜ್ಯ ಕಟ್ಟಡಗಳನ್ನು ಬುಲ್ಡೋಝರ್ ಬಳಸಿ ಕೆಡವಲಾಯಿತು. | PHOTO : NAEEM ANSARI/ANI

ಏನಾದರೂ ನೆಪ ಹಿಡಿದುಕೊಂಡು ಅಲ್ಪಸಂಖ್ಯಾತರು ಹಾಗು ಇತರ ದುರ್ಬಲ ವರ್ಗಗಳ ವಿರುದ್ಧ ಮುಗಿಬೀಳುವುದನ್ನು ಬಿಜೆಪಿ ತಪ್ಪದೆ ಮಾಡಿಕೊಂಡು ಬಂದಿದೆ. ಹಾಗೆ ಮಾಡುವುದನ್ನು ಪ್ರಧಾನಿ ಮೋದಿ, ಯುಪಿಯ ಸಿಎಂ ಆದಿತ್ಯನಾಥ್ ಅವರು ದೊಡ್ಡ ಸಾಹಸ, ಸಾಧನೆ ಎಂಬಂತೆ ಬಿಂಬಿಸಿಕೊಂಡು ಬಂದಿದ್ದಾರೆ. ದಮನಿಸುವುದನ್ನೇ ದೊಡ್ಡ ಸಾಧನೆಯೆಂದುಕೊಂಡವರ ಬಳಿ ಇರುವ ಬುಲ್ಡೋಝರ್ ಅಮಾಯಕರ ಮನೆಗಳನ್ನು ಕೆಡವಿಹಾಕಿದೆ.

ಭಾರತ ವಿಶ್ವಗುರು ಆಗುತ್ತೋ ಇಲ್ಲವೋ? ಆದರೆ ಹೀಗೇ ಹೋದರೆ ಒಂದು ದಿನ ಭಾರತಕ್ಕೆ ಬುಲ್ಡೋಝರ್ ರಾಜ್ ಎಂಬ ಹೆಸರು ಬರುವ ಅಪಾಯವಿದೆ. ಬುಲ್ಡೋಝರ್ ಲಕ್ಷಾಂತರ ಜನರನ್ನು ಬೀದಿಪಾಲು ಮಾಡಿದೆ. ಕನಿಷ್ಠ ಒಂದು ಮುಕ್ಕಾಲು ಕೊಟಿ ಮಂದಿ ಆ ಭಯದಲ್ಲಿಯೇ ಬದುಕುವ ಸ್ಥಿತಿ ಈ ದೇಶದಲ್ಲಿ ಸೃಷ್ಟಿಯಾಗಿದೆ.

ದೇಶದಲ್ಲಿ ದಿನ ಕಳೆದಂತೆ ಬುಲ್ಡೋಝರ್ ನೀತಿ ಹೆಚ್ಚುತ್ತಲೇ ಇದೆ. ನ್ಯಾಯಾಲಯಗಳ ಅನುಮತಿಯಿಲ್ಲದೆ ಮನೆಗಳನ್ನು ಒಡೆದು ಹಾಕುವುದೇ ಹೊಸ ನ್ಯಾಯವಾಗಿ ಬಿಟ್ಟಿದೆ. ಅದೆಷ್ಟೋ ಜನರು ಈ ಕಾರಣದಿಂದ ಬೀದಿಪಾಲಾಗಿದ್ದಾರೆ. ಕಳೆದ ಎರಡು ವರ್ಷದಲ್ಲಿ 1.5 ಲಕ್ಷಕ್ಕಿಂತಲೂ ಹೆಚ್ಚು ಮನೆಗಳನ್ನು ಬುಲ್ಡೋಝರ್ ಬಳಸಿ ನೆಲಸಮ ಮಾಡಲಾಗಿದೆ. ಇದರಿಂದಾಗಿ 7 ಲಕ್ಷಕ್ಕಿಂತ ಹೆಚ್ಚು ಜನರು ಮನೆಯಿಲ್ಲದಂತಹ ಪರಿಸ್ಥಿತಿಯಲ್ಲಿದ್ದಾರೆ.

ಫ್ರಂಟ್ ಲೈನ್ ನಲ್ಲಿ ಪ್ರಕಟವಾಗಿರುವ ಅನುಜ್ ಬೆಹಲ್ ಅವರ ವರದಿ ಹೇಳುತ್ತಿರುವಂತೆ, 2017ರಿಂದ 2023ರ ಅವಧಿಯಲ್ಲಿ ಬುಲ್ಡೋಝರ್ ನೀತಿ ಗಣನೀಯವಾಗಿ ಹೆಚ್ಚಳ ಕಂಡಿದೆ. ಕನಿಷ್ಠ ಪಕ್ಷ 16,80,000 ಜನರು ಈ ರೀತಿಯ ಕ್ರಮಗಳಿಂದ ಸಂತ್ರಸ್ತರಾಗಿದ್ದಾರೆ. ಬೇರೆ ಬೇರೆ ಕಾರಣಗಳಿಂದ ಈ ದ್ವಂಸಗಳು ನಡೆದಿವೆ. ಕೆಲವು ಕಡೆ ಕೊಳೆಗೇರಿ ಇಲ್ಲವಾಗಿಸಲು ನಡೆದಿದ್ದರೆ, ಇನ್ನು ಕೆಲವು ಕಡೆ ನಗರಾಭಿವೃದ್ಧಿ ಹೆಸರಲ್ಲಿ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ತಮಗೆ ಬೇಡವಾದವರ ಮನೆಗಳನ್ನು ಕೆಡವಲು ಸರ್ಕಾರಕ್ಕೊಂದು ನೆಪ ಬೇಕು. ಅದಕ್ಕೆ ಬುಲ್ಡೋಝರ್ ಬಳಸಿ ನೆಲಸಮ ಮಾಡಲಾಗಿದೆ. 2023ರಲ್ಲಿ ಈ ರೀತಿ 3 ಲಕ್ಷ ಜನರನ್ನು ಬೀದಿಪಾಲು ಮಾಡಲಾಗಿದೆ. 2022ರಲ್ಲಿ 1.5 ಲಕ್ಷ ಜನರು ತೊಂದರೆಗೆ ಒಳಗಾಗಿದ್ದರು. ದ್ವಂಸಗೊಂಡ ಹಲವು ಮನೆಗಳು ದಶಕಗಳಿಂದ ಅಲ್ಲಿಯೇ ಇದ್ದವು. ಈ ಮನೆಗಳು ಅಕ್ರಮವಾಗಿ ಕಟ್ಟಿದವು ಎಂಬುದು ಸರಕಾರದ ವಾದ. ವಿಶೇಷವೆಂದರೆ ಈ ರೀತಿಯ ಘಟನೆಗಳಲ್ಲಿ ಬಾಧಿತರಾದ ಬಹುತೇಕರು ಮುಸ್ಲಿಂ ಸಮುದಾಯದವರು.

ಈ ರೀತಿಯ ಧ್ವಂಸಗಳ ಕಾರಣದಿಂದ ಬಾಧಿತರಾದವರಲ್ಲಿ ಶೇ.44ರಷ್ಟು ಮುಸ್ಲಿಮರಿದ್ದಾರೆ. ಶೇ.23ರಷ್ಟು ಬುಡಕಟ್ಟು ಜನಾಂಗದವರು. ಶೇ.17ರಷ್ಟು ಹಿಂದುಳಿದವರು ಮತ್ತು ಶೇ.5ರಷ್ಟು ದಲಿತರು. ಅಷ್ಟೇ ಅಲ್ಲದೆ, ವಿವಿಧ ಪ್ರಕರಣಗಳ ಆರೋಪಿಗಳ ಮನೆ ಮೇಲೆಯೂ ಬುಲ್ಡೋಝರ್ ಚಲಾಯಿಸಲಾಗಿದೆ. ಯಾವುದೇ ನ್ಯಾಯಾಲಯದ ಪ್ರಕ್ರಿಯೆ ಇಲ್ಲದೆ ಇದನ್ನೆಲ್ಲ ಮಾಡಲಾಗಿದೆ.

ಪ್ರಕರಣಗಳಿಗಾಗಿ ಅಲ್ಲ, ಬದಲಾಗಿ ಆರೋಪಿಗಳ ಮನೆ ಅಕ್ರಮವಾಗಿದ್ದಕ್ಕೆ ಹೀಗೆ ಬುಲ್ಡೋಝರ್ ಚಲಾಯಿಸಲಾಗಿದೆ ಎಂಬ ಸಿದ್ಧ ಸಮಜಾಯಿಷಿ ನೀಡಲಾಗಿದೆ. ಈ ರೀತಿಯ ಪ್ರಕಾರಣಗಳಲ್ಲಿ ಹಲವು ಬಾರಿ ಯಾವುದೇ ಸೂಚನೆ ನೀಡದೆ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಾಲಯಗಳು ಈ ಕುರಿತು ಹಲವು ಬಾರಿ ಕಳವಳ ವ್ಯಕ್ತಪಡಿಸಿದ್ದೂ ಇದೆ. ಈ ರೀತಿ ದ್ವಂಸಗೊಳಿಸಲಾದ ಮನೆಗಳಲ್ಲಿ ಪಿಎಂ ಅವಾಸ್ ಯೋಜನೆಯಡಿ ನೀಡಲಾದ ಒಂದು ಮನೆಯೂ ಸೇರಿದೆ ಎಂಬುದು ಗಮನಾರ್ಹ!

ತಿಂಗಳ ಹಿಂದೆ ಬೀಫ್ ಸಿಕ್ಕಿದೆ ಎಂಬ ಆರೋಪದ ಮೇಲೆ ಮಧ್ಯಪ್ರದೇಶದಲ್ಲಿ ಮುಸ್ಲಿಮ್ ಸಮುದಾಯದವರ ಮನೆ ನೆಲಸಮಗೊಳಿಸಲಾಗಿತ್ತು. ಅಮ್ನೆಸ್ಟಿ ಇಂಟರ್ನ್ಯಾಷನಲ್ ವರದಿ ಪ್ರಕಾರ, 128 ಆರೋಪಿಗಳ ಮನೆಗಳು ನೆಲಸಮಗೊಳಿಸಲಾಗಿದ್ದು 617 ಜನರು ಇದರಿಂದ ತೊಂದರೆಗೊಳಗಾಗಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಬುಲ್ಡೋಝರ್ ಬಾಬಾ ಎಂದೇ ಕರೆಯಲಾಗುತ್ತಿದೆ. ಅದೇ ಅವರ ದೊಡ್ಡ ಸಾಧನೆ ಎಂಬಂತೆ ಅವರ ಬೆಂಬಲಿಗರು ಅಬ್ಬರದ ಪ್ರಚಾರ ಮಾಡುತ್ತಾರೆ.

ಪ್ರಧಾನಿ ಮೋದಿ ಬಾರಾಬಂಕಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಸರಕಾರ ಬಂದರೆ ಅವರು ರಾಮ ಮಂದಿರದ ಮೇಲೆ ಬುಲ್ಡೋಝರ್ ಚಲಾಯಿಸುತ್ತಾರೆ ಎಂದು ಅತಿರೇಕದ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲ, ಬುಲ್ಡೋಝರ್ ಎಲ್ಲಿ ಚಲಾಯಿಸಬೇಕು, ಎಲ್ಲಿ ಚಲಾಯಿಸಬಾರದು ಎಂಬುದನ್ನು ಆದಿತ್ಯನಾಥ್ ಅವರಿಂದ ಕಲಿತುಕೊಳ್ಳಬೇಕೆಂದು ಹೇಳಿದ್ದರು.

ಅವರಿಗೆ ಕೆಡವಿ ಹಾಕುವುದೇ ಒಂದು ರಾಜಕೀಯ ಆಟ. ಅವರ ಈ ಆಟದಿಂದಾಗಿ, 1 ಕೋಟಿ 70 ಲಕ್ಷಕ್ಕಿಂತಲೂ ಹೆಚ್ಚು ಜನ ತಮ್ಮ ಮನೆಯೂ ನೆಲಸಮಗೊಳ್ಳಬಹುದು ಎಂಬ ಭಯದಲ್ಲಿಯೇ ಬದುಕುತ್ತಿದ್ದಾರೆ ಎನ್ನುತ್ತಿದೆ ಫ್ರಂಟ್ ಲೈನ್ ವರದಿ.

ಸೌಜನ್ಯ : frontline.thehindu.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!