ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ನಿವಾಸದ ಮೇಲೆ ಸಿಬಿಐ ದಾಳಿ
Update: 2024-03-23 05:41 GMT
ಹೊಸದಿಲ್ಲಿ/ಕೋಲ್ಕತ್ತಾ: ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಹುವಾ ಮೊಯಿತ್ರಾರ ಕೋಲ್ಕತ್ತಾ ನಿವಾಸದ ಮೇಲೆ ಇಂದು ಬೆಳಗ್ಗೆ ಕೇಂದ್ರೀಯ ತನಿಖಾ ದಳ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ಕೈಗೊಂಡಿದೆ.
ಮಹುವಾ ಮೊಯಿತ್ರಾ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ದುಬೈ ಮೂಲದ ಉದ್ಯಮಿ ಹೀರಾನಂದನಿ ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತು ತನಿಖೆ ನಡೆಸಿದ್ದ ಲೋಕಸಭಾ ನೈತಿಕ ಸಮಿತಿಯು, ಮಹುವಾ ಮೊಯಿತ್ರಾ ಅವರನ್ನು ದೋಷಿ ಎಂದು ಘೋಷಿಸಿ, ಸಂಸತ್ತಿನಿಂದ ಉಚ್ಚಾಟಿಸಲು ಲೋಕಸಭಾ ಸ್ಪೀಕರ್ ಅವರಿಗೆ ಶಿಫಾರಸು ಮಾಡಿತ್ತು. ಅದರಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಅವರನ್ನು ಲೋಕಸಭೆಯಿಂದ ಉಚ್ಚಾಟಿಸಿದ್ದರು.
ಈ ಕ್ರಮವನ್ನು ಪ್ರಶ್ನಿಸಿ, ಮಹುವಾ ಮೊಯಿತ್ರಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಸಂಬಂಧ ವಿಚಾರಣೆ ನಡೆಯುತ್ತಿದೆ.