ರಫಾ ಮೇಲೆ ಇಸ್ರೇಲ್ ದಾಳಿ: ಫೆಲೆಸ್ತೀನಿಯನ್ನರಿಗೆ ಬೆಂಬಲ ಸೂಚಿಸಿದ ಸಿನಿಮಾ ತಾರೆಯರು
ಮುಂಬೈ: ದಕ್ಷಿಣ ಗಾಝಾ ನಗರವಾದ ರಫಾ ಮೇಲೆ ಇಸ್ರೇಲ್ ನಡೆಸುತ್ತಿರುವ ವಾಯು ದಾಳಿಯ ವಿರುದ್ಧ ಜಗತ್ತಿನಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಇದೀಗ ವಿಶ್ವಾದ್ಯಂತ 'All eyes on Rafah' ಅಭಿಯಾನವು ತೀವ್ರ ಸ್ವರೂಪ ಪಡೆದುಕೊಂಡಿದೆ. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮರ ಪತ್ನಿ ರಿತಿಕಾ ಶರ್ಮ ಕೂಡಾ 'ಆಲ್ ಐಸ್ ಆನ್ ರಫಾ' ಪೋಸ್ಟರನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು, ನಂತರ ಅಳಿಸಿ ಹಾಕಿದ್ದರು.
ಇತ್ತ ಬಾಲಿವುಡ್‌ನಲ್ಲೂ ಕೂಡಾ ರಫಾ ಮೇಲಿನ ಇಸ್ರೇಲ್ ದಾಳಿಯ ವಿರುದ್ಧದ ಪ್ರತಿಭಟನೆಯ ಧ್ವನಿಗಳು ಸದ್ದು ಮಾಡುತ್ತಿವೆ. ಬಾಲಿವುಡ್ ನಟಿ ಮಲೈಕಾ ಅರೋರ, 'There is no such thing as killing children legally' (ಮಕ್ಕಳನ್ನು ಕಾನೂನಾತ್ಮಕವಾಗಿ ಕೊಲ್ಲುವುದಕ್ಕಿಂತ ಹೇಯವಾದುದು ಮತ್ತೊಂದಿಲ್ಲ) ಎಂದು ಗಾಝಾ ಮೇಲಿನ ಇಸ್ರೇಲ್ ದಾಳಿಯನ್ನು ಕಟುವಾಗಿ ಖಂಡಿಸಿದ್ದಾರೆ.
ಅವರಲ್ಲದೇ, ನಟ ವರುಣ್ ಧವನ್, ನಟಿಯರಾದ ಮಾಧುರಿ ದೀಕ್ಷಿತ್, ಹನ್ಸಿಕಾ ಮೋಟ್ವಾನಿ, ಇಲಿಯಾನಾ ಡಿ'ಕ್ರೂಝ್, ಸೋನಂ ಕಪೂರ್, ರಾಕುಲ್ ಪ್ರೀತ್ ಸಿಂಗ್, ತೃಪ್ತಿ ದಿಮ್ರಿ ಹಾಗೂ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್, ಕಾಮಿಡಿಯನ್ ವೀರ್ ದಾಸ್ ಕೂಡಾ 'ಆಲ್ ಐಸ್ ಆನ್ ರಫಾ' ಪೋಸ್ಟರನ್ನು ಹಂಚಿಕೊಂಡು, ಗಾಝಾದಲ್ಲಿನ ಫೆಲೆಸ್ತೀನಿಯನ್ನರ ಪರ ತಮ್ಮ ಬೆಂಬಲ ಸೂಚಿಸಿದ್ದಾರೆ.
ತನ್ನ ಮಿತ್ರ ರಾಷ್ಟ್ರವಾದ ಅಮೆರಿಕದ ಎಚ್ಚರಿಕೆ ಹಾಗೂ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿಗೂ ಕವಡೆ ಕಾಸಿನ ಕಿಮ್ಮತ್ತು ನೀಡದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಗಾಝಾ ಮೇಲಿನ ಆಕ್ರಮಣವನ್ನು ಮುಂದುವರಿಸಿದ್ದಾರೆ. ನೆತನ್ಯಾಹು ಅವರ ಈ ನಡೆಯು ಜಾಗತಿಕ ಮಟ್ಟದಲ್ಲಿ ವ್ಯಾಪಕ ಖಂಡನೆಗೊಳಗಾಗಿದೆ.