ಹರ್ಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ ನಿಧನ

Update: 2024-12-20 08:41 GMT

ಓಂ ಪ್ರಕಾಶ್ ಚೌಟಾಲ (PTI)

ಚಂಡೀಗಢ: ಹರ್ಯಾಣದ ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ರಾಷ್ಟ್ರೀಯ ಲೋಕದಳ(INLD)ದ ಮುಖ್ಯಸ್ಥರಾದ ಓಂ ಪ್ರಕಾಶ್ ಚೌಟಾಲ ಇಂದು ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಹೃದಯ ಸ್ತಂಭನಕ್ಕೆ ತುತ್ತಾದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಯಾವುದೇ ಪ್ರಯೋಜನವಾಗಿಲ್ಲ.

ಏಳು ಬಾರಿ ಶಾಸಕರಾಗಿದ್ದ ಓಂ ಪ್ರಕಾಶ್ ಚೌಟಾಲ, ದಾಖಲೆಯ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು. 1989ರಲ್ಲಿ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವರ ಅಧಿಕಾರ 1999ರಿಂದ 2005ರ ಅವಧಿಯ ನಂತರ ಕೊನೆಯಾಗಿತ್ತು. ಓಂ ಪ್ರಕಾಶ್ ಚೌಟಾಲ, ಭಾರತದ ಆರನೆಯ ಉಪ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ ಚೌಧರಿ ದೇವಿಲಾಲ್ ಅವರ ಪುತ್ರರಾಗಿದ್ದರು.

ತಮ್ಮ ರಾಜಕೀಯ ಜೀವನದಲ್ಲಿ ಹಲವಾರು ವಿವಾದಗಳಿಗೆ ಗುರಿಯಾದರೂ, ಭಾರತದ ಉನ್ನತ ರಾಜಕೀಯ ನಾಯಕರ ಪೈಕಿ ಓಂ ಪ್ರಕಾಶ್ ಚೌಟಾಲಾ ಕೂಡಾ ಒಬ್ಬರಾಗಿದ್ದರು. ತಮ್ಮ ವಿರುದ್ಧ ಕೇಳಿ ಬಂದಿದ್ದ ನೇಮಕಾತಿ ಹಗರಣದಲ್ಲಿ ಅವರು ಸೆರೆವಾಸಕ್ಕೂ ಗುರಿಯಾಗಿದ್ದರು.

1999-2004ರ ನಡುವೆ ನಡೆದಿದ್ದ ಹರ್ಯಾಣ ಕಿರಿಯ ಪ್ರಾಥಮಿಕ ಶಿಕ್ಷಕರ ನೇಮಕಾತಿ ಹಗರಣದಲ್ಲಿ 2013ರಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಓಂ ಪ್ರಕಾಶ್ ಚೌಟಾಲ, ಒಂಬತ್ತೂವರೆ ವರ್ಷಗಳ ಸೆರೆವಾಸ ಪೂರ್ಣಗೊಳಿಸಿದ ಬಳಿಕ ಜುಲೈ 2021ರಲ್ಲಿ ಕಾರಾಗೃಹದಿಂದ ಬಿಡುಗಡೆಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News