ಅಂಬೇಡ್ಕರ್ ಕುರಿತು ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ: ಕೇರಳ ಮುಖ್ಯಮಂತ್ರಿಯ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್
ಕೊಚ್ಚಿ: ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಆಕ್ಷೇಪಾರ್ಹ ಹೇಳಿಕೆಯ ಕುರಿತು ಆಡಳಿತಾರೂಢ ಸಿಪಿಐ(ಎಂ) ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯಾವುದೇ ಹೇಳಿಕೆ ನೀಡದಿರುವುದು ಆಶ್ಚರ್ಯಕರವಾಗಿದೆ ಎಂದು ಶುಕ್ರವಾರ ಕಾಂಗ್ರೆಸ್ ಶಾಸಕ ಮ್ಯಾಥ್ಯೂ ಕುಳಲ್ ನಾದನ್ ಹೇಳಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಳಲ್ ನಾದನ್, ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ನೆರೆಯ ರಾಜ್ಯವಾದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿದಂತೆ ಬಿಜೆಪಿಯೇತರ ಸರಕಾರದ ಎಲ್ಲ ಮುಖ್ಯಮಂತ್ರಿಗಳು ಬಲವಾಗಿ ಖಂಡಿಸಿದ್ದಾರೆ. ಆದರೆ, ಈ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಿಪಿಐ(ಎಂ) ಕಾರ್ಯದರ್ಶಿ ಎಂ.ವಿ.ಗೋವಿಂದನ್ ಮೌನಕ್ಕೆ ಶರಣಾಗಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀನಾ ಅವರನ್ನು ಸಮರ್ಥಿಸಿಕೊಳ್ಳಲು ತೋರಿದ ತೀವ್ರ ಆಸಕ್ತಿಯನ್ನು ಅಂಬೇಡ್ಕರ್ ಅವರಿಗೆ ಆಗಿರುವ ಅವಮಾನವನ್ನು ಖಂಡಿಸಲು ಸಿಪಿಐ(ಎಂ) ತೋರಿಸುತ್ತಿಲ್ಲ. ಇದು ಸಿಪಿಐ(ಎಂ)ನ ಸ್ಥಿತಿಯನ್ನು ತೋರಿಸುತ್ತಿದೆ” ಎಂದು ಅವರು ವಾಗ್ದಾಳಿ ನಡೆಸಿದರು.
“ಇದಕ್ಕಿರುವ ಕಾರಣವೆಂದರೆ, ಅಮಿತ್ ಶಾ ವಿರುದ್ಧ ಹೇಳಿಕೆ ನೀಡಲು ಪಿಣರಾಯಿ ವಿಜಯನ್ ಹೆದರುತ್ತಿದ್ದಾರೆ ಎಂಬುದು ನನ್ನ ಭಾವನೆಯಾಗಿದೆ. ಅಮಿತ್ ಶಾ ವಿರುದ್ಧ ಪ್ರತಿಕ್ರಿಯಿಸಿದರೆ, ತಮ್ಮ ಪುತ್ರಿಯ ಹಣೆಬರಹ ಏನಾಗುತ್ತದೊ ಎಂದು ಪಿಣರಾಯಿ ವಿಜಯನ್ ಭೀತಿಗೊಂಡಿದ್ದಾರೆ. ಪಿಣರಾಯಿ ವಿಜಯನ್ ಹಾಗೂ ಅವರ ಪುತ್ರಿ ವೀಣಾ ವಿರುದ್ಧ ಹಲವಾರು ಕೇಂದ್ರೀಯ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ” ಎಂದು ಮುವತ್ತುಪುಳದ ಶಾಸಕರಾದ ಮ್ಯಾಥ್ಯೂ ಕುಳಲ್ ನಾದನ್ ಆರೋಪಿಸಿದರು.
ಎಡಪಕ್ಷಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜನರಿಗೆ ಭಾರಿ ಋಣಿಯಾಗಿದ್ದರೂ, ಅಮಿತ್ ಶಾ ವಿರುದ್ಧ ಪ್ರತಿಕ್ರಿಯಿಸುತ್ತಿಲ್ಲ ಎಂದೂ ಅವರು ಟೀಕಿಸಿದರು.
“ಅಂಬೇಡ್ಕರ್ ಹೆಸರನ್ನು ಪದೇ ಪದೇ ಹೇಳುವ ಬದಲು ದೇವರ ಹೆಸರನ್ನು ಅಷ್ಟು ಬಾರಿ ಹೇಳಿದ್ದರೆ, ಏಳು ಜನ್ಮದ ಸ್ವರ್ಗ ಪ್ರಾಪ್ತಿಯಾಗಿರುತ್ತಿತ್ತು” ಎಂದು ಮಂಗಳವಾರ ಕಾಂಗ್ರೆಸ್ ಸದಸ್ಯರನ್ನುದ್ದೇಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಇದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.