ನಾಗ್ಪುರದಲ್ಲೇ "ಹಮ್ ತಯ್ಯಾರ್ ಹೈ" ಎಂದು ಘೋಷಿಸಿದ ಕಾಂಗ್ರೆಸ್

Update: 2024-01-09 06:26 GMT
Editor : Ismail | Byline : ಆರ್. ಜೀವಿ

"ಹಮ್ ತಯ್ಯಾರ್ ಹೈ " . ಹೀಗೆಂದು ಘೋಷಿಸಿದ್ದಾರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ವಿಶೇಷ ಅಂದ್ರೆ ಲೋಕಸಭಾ ಚುನಾವಣೆಗೆ ಮೊದಲ ಪ್ರಚಾರ ಸಮಾವೇಶ ಎಂದೇ ಪರಿಗಣಿಸಲಾಗಿರುವ ಈ ಬೃಹತ್ ಸಮಾವೇಶವನ್ನು ಕಾಂಗ್ರೆಸ್ ಆಯೋಜಿಸಿದ್ದು ಆರೆಸ್ಸೆಸ್ ಕೇಂದ್ರ ಕಚೇರಿ ಇರುವ ಮಹಾರಾಷ್ಟ್ರದ ನಾಗ್ಪುರದಲ್ಲಿ.

ಈಗ ನಾಗ್ಪುರ ಅಂದ್ರೆ ಆರೆಸ್ಸೆಸ್ ಅಂತಾಗಿಬಿಟ್ಟಿದೆ. ಆದರೆ ನಾಗ್ಪುರಕ್ಕೆ ಭಾರತದ ಇತಿಹಾಸದಲ್ಲಿ ಎರಡು ಕಾರಣಗಳಿಗೆ ಭಾರೀ ಮಹತ್ವವಿದೆ. 1956 ರಲ್ಲಿ ಸಾವಿರಾರು ದಲಿತರ ಜೊತೆ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ದೀಕ್ಷಾ ಭೂಮಿ ಇರೋದು ನಾಗ್ಪುರದಲ್ಲಿ. ಇನ್ನು ಗಾಂಧೀಜಿಗೂ ನಾಗ್ಪುರಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಕೇಂದ್ರ ಸ್ಥಾನವಾಗಿ ಆಯ್ದುಕೊಂಡು ಸೇವಾಶ್ರಮ ಸ್ಥಾಪಿಸಿದ ವಾರ್ಧಾ ಇರೋದೂ ಇದೇ ನಾಗ್ಪುರ ಬಳಿ.

ಈಗ ಅದೇ ನಾಗ್ಪುರಕ್ಕೆ ಹೋಗಿ ಆರೆಸ್ಸೆಸ್ ವಿರುದ್ಧವೇ ಸಮರ ಸಾರಿದ್ದಾರೆ ರಾಹುಲ್ ಗಾಂಧಿ. ಅವರ ಜೊತೆಗೆ ಅಷ್ಟೇ ಬದ್ಧತೆಯಿಂದ ನಿಂತು ಆರೆಸ್ಸೆಸ್ ವಿರುದ್ಧ ಹರಿಹಾಯ್ದಿದ್ದಾರೆ ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು. ಕಳೆದ ಒಂದೆರಡು ವರ್ಷಗಳಿಂದ ರಾಹುಲ್ ಗಾಂಧಿ ಆರೆಸ್ಸೆಸ್ ಅನ್ನು ನೇರವಾಗಿಯೇ ಎದುರು ಹಾಕಿಕೊಂಡಿದ್ದಾರೆ.

ಆರೆಸ್ಸೆಸ್ ನ ಸಿದ್ಧಾಂತ ಹಾಗು ಅದರ ಅಪಾಯಗಳ ಬಗ್ಗೆ ಕಾಂಗ್ರೆಸ್ ನ ಇತರ ಹಿರಿಯ ನಾಯಕರಲ್ಲಿ ಈ ರೀತಿಯ ಸ್ಪಷ್ಟತೆ ಎಂದೂ ಕಂಡಿಲ್ಲ.

ಕಾಂಗ್ರೆಸ್ ನಲ್ಲೂ ಕೆಲವು ನಾಯಕರು ಆರೆಸ್ಸೆಸ್ ವಿರುದ್ಧ ಮಾತಾಡ್ತಾರೆ. ಅದರ ಅಪಾಯಗಳ ಬಗ್ಗೆ ಹೇಳ್ತಾರೆ. ಆದರೆ ಒಂದು ಪಕ್ಷವಾಗಿ ಕಾಂಗ್ರೆಸ್ ಎಂದೂ ಆರೆಸ್ಸೆಸ್ ಸಿದ್ಧಾಂತದ ವಿರುದ್ಧ ಸಂಘಟಿತವಾಗಿ ಹೋರಾಡಲೇ ಇಲ್ಲ.

ಈಗಲೂ ಕಮಲ್ ನಾಥ್, ಭೂಪೇಶ್ ಭಾಗೇಲ್, ಅಶೋಕ್ ಗೆಹಲೋಟ್ ರಂತಹ ನಾಯಕರನ್ನು ನಂಬಿಕೊಂಡು ಆರೆಸ್ಸೆಸ್ ಸಿದ್ಧಾಂತದ ವಿರುದ್ಧದ ಹೋರಾಟ ಅಸಾಧ್ಯ ಎಂಬುದು ರಾಹುಲ್ ಗಾಂಧಿಗೆ ಮನವರಿಕೆಯಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಆರೆಸ್ಸೆಸ್ ವಿರುದ್ಧ ಹೋರಾಡುವುದೇ ಈಗ ಮುಖ್ಯ ಎಂಬುದೂ ರಾಹುಲ್ ಗಾಂಧಿಗೆ ಸ್ಪಷ್ಟವಾಗಿ ಗೊತ್ತಾಗಿದೆ.

ಬಿಜೆಪಿಯನ್ನು ರಾಜಕೀಯವಾಗಿ ಸೋಲಿಸಬೇಕಾದರೆ ಮೊದಲು ಆರೆಸ್ಸೆಸ್ ಅನ್ನು, ಅದರ ಸಿದ್ಧಾಂತವನ್ನು ಸೋಲಿಸಲೇಬೇಕು. ಅದಾಗದೆ ಅಲ್ಲೊಂದು ಇಲ್ಲೊಂದು ಚುನಾವಣೆಯಲ್ಲಿ ಬಿಜೆಪಿ ಎದುರು ಗೆದ್ದು ಆಗೋದು ಏನೂ ಇಲ್ಲ ಎಂಬುದು ಅವರಿಗೆ ಅರ್ಥವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ " ಈಗ ಯಾಕಾಗಿ ಹೋರಾಡಬೇಕು, ಮತ್ತು ಯಾರ ವಿರುದ್ಧ ಹೋರಾಡಬೇಕು" ಎಂಬುದು ರಾಹುಲ್ ಗಾಂಧಿಗೆ ಸ್ಪಷ್ಟವಾಗಿದೆ.

ಆದರೆ ಆ ಸ್ಪಷ್ಟತೆ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಬಂದಿಲ್ಲ. ಮಲ್ಲಿಕಾರ್ಜುನ ಖರ್ಗೆಯಂತಹ ನಾಯಕರು ಮಾತ್ರ ಈ ಹೋರಾಟದಲ್ಲಿ ರಾಹುಲ್ ಜೊತೆ ನಿಂತಿದ್ದಾರೆ. ಇನ್ನೂ ಒಂದು ವಿಶೇಷ ಅಂದ್ರೆ ಕಳೆದೊಂದು ದಶಕದಲ್ಲಿ ಕಾಂಗ್ರೆಸ್ ಗೆಲುವಿಗಿಂತ ಸೋಲು ಕಂಡಿದ್ದೇ ಹೆಚ್ಚು. ಪ್ರತಿ ಸೋಲಿನ ಬಳಿಕವೂ ಪಕ್ಷ ಕಂಗೆಡುತ್ತಿತ್ತು. ಹತಾಶ ಸ್ಥಿತಿ ಕಾಣುತ್ತಿತ್ತು. ಮತ್ತೆ ತೆರೆಮರೆಗೆ ಸರಿಯುತ್ತಿತ್ತು.

ಆದರೆ ಈ ಬಾರಿ ಪಂಚ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡರೂ ಕಾಂಗ್ರೆಸ್ ನಲ್ಲಿ ಅಂತಹ ಹತಾಶೆ ಕಾಣುತ್ತಿಲ್ಲ.

ಅದು ಕಂಗೆಟ್ಟಂತೆ ಕಾಣುತ್ತಿಲ್ಲ. ವಿಶೇಷವಾಗಿ ರಾಹುಲ್ ಗಾಂಧಿಯವರಂತೂ ಸೋಲೊಪ್ಪಿಕೊಳ್ಳುವ ಸಮಯ ಇದಲ್ಲ ಎಂದು ಗಟ್ಟಿ ನಿರ್ಧಾರ ಮಾಡಿದವರಂತೆ ಬೀದಿಗಿಳಿದಿದ್ದಾರೆ.

ಅದೂ ನೇರವಾಗಿ ಆರೆಸ್ಸೆಸ್ ವಿರುದ್ಧವೇ ನಮ್ಮ ಹೋರಾಟ ಎಂದು ಘೋಷಿಸುವ ಮೂಲಕ. ಅತ್ತ ಖರ್ಗೆಯವರೂ ಸೋಲಿನ ಬಳಿಕ ಪಕ್ಷ ಸಂಘಟನೆಯಲ್ಲಿ ಇನ್ನಷ್ಟು ಚುರುಕಾಗಿದ್ದಾರೆ. ರಾಜ್ಯಗಳ ಮುಖಂಡರೊಂದಿಗೆ ಚುನಾವಣಾ ತಯಾರಿ ಬಗ್ಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಪ್ರತಿ ಪ್ರಮುಖ ವಿಷಯದ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಆದರೆ ಇದಾವುದೂ ಮಡಿಲ ಮೀಡಿಯಾಗಳಲ್ಲಿ ಸುದ್ದಿಯಾಗೋದಿಲ್ಲ.

ಈಗ ದಿಲ್ಲಿಯಲ್ಲಿರೋದು ಸಂಘದ ಸರಕಾರ ಎಂದೇ ರಾಹುಲ್ ಗಾಂಧಿ ಹಾಗು ಮಲ್ಲಿಕಾರ್ಜುನ ಖರ್ಗೆ ನಾಗ್ಪುರದಲ್ಲಿ ಹೇಳಿದ್ದಾರೆ. ಆರೆಸ್ಸೆಸ್ ಇದೇ ನಾಗ್ಪುರದಲ್ಲಿ ಹುಟ್ಟಿ ಇವತ್ತು ಈ ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ ಎಂದು ಖರ್ಗೆ ಹೇಳಿದ್ದಾರೆ. ಈ ದೇಶದಲ್ಲಿ ಯಾವುದೇ ಉನ್ನತ ಸ್ವಾಯತ್ತ ಸಂಸ್ಥೆಗಳಿಂದ ಹಿಡಿದು ವಿವಿಗಳವರೆಗೆ ಎಲ್ಲೂ ಅರ್ಹರ ನೇಮಕವಾಗುತ್ತಿಲ್ಲ. ಎಲ್ಲ ನೇಮಕಾತಿಗಳೂ ಸಂಘದಲ್ಲಿದ್ದಾರಾ ಅಂತ ನೋಡಿ ಮಾಡಲಾಗ್ತಾ ಇದೆ. ಹೀಗೆ ನೇಮಕ ಆಗುವರಿಗೆ ಬೇರೇನೂ ಗೊತ್ತಿರುವುದಿಲ್ಲ. ಅವರಿಗೆ ಸಂಘದ ಕೆಲಸ ಮಾಡೋದು ಮಾತ್ರ ಗೊತ್ತು ಎಂದು ಹೇಳಿದ್ದಾರೆ ರಾಹುಲ್ ಗಾಂಧಿ.

ಬಿಜೆಪಿ ಸರಕಾರವನ್ನು ಹಿಂದೆ ರಾಜ ಮಹಾರಾಜರು ನಡೆಸುತ್ತಿದ್ದ ದರ್ಬಾರಿಗೆ ಹೋಲಿಸಿರುವ ರಾಹುಲ್ ಗಾಂಧಿ ಬಿಜೆಪಿ ಸಂಸದರನ್ನೇ ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಜಾತಿ ಗಣತಿ ಬಗ್ಗೆ ಹೇಳಿದ್ದು ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಲಾಭ ತಂದಿಲ್ಲ, ನಷ್ಟವೇ ಆಗಿದೆ ಎಂದು ಕಾಂಗ್ರೆಸಿಗರೇ ಹೇಳಿಕೊಂಡು ತಿರುಗುತ್ತಿದ್ದರು.

ಈಗ ರಾಹುಲ್ ಗಾಂಧಿಯವರೇ ನಮ್ಮ ಸರಕಾರ ಬಂದರೆ ದೇಶಾದ್ಯಂತ ಜಾತಿ ಗಣತಿ ಮಾಡಿಸುವುದಾಗಿ ಪುನರುಚ್ಚರಿಸಿದ್ದಾರೆ. ಅಂದರೆ ಅವರಿಗೀಗ ತಮ್ಮ ಆದ್ಯತೆಗಳ ಬಗ್ಗೆ ಸರಿಯಾಗಿ ಗೊತ್ತಾಗಿದೆ. ಚುನಾವಣಾ ಫಲಿತಾಂಶದ ಆಧಾರದಲ್ಲಿ ಅದು ಬದಲಾಗೋದಿಲ್ಲ. ಒಟ್ಟಾರೆ 2024 ರ ಲೋಕಸಭಾ ಚುನಾವಣೆಗೆ ಹೊರಟಿರುವ ರಾಹುಲ್ ಗಾಂಧಿ ಪ್ರಬುದ್ಧ ನಾಯಕ ರಾಹುಲ್ ಗಾಂಧಿಯಾಗಿದ್ದಾರೆ.

ಅವರು ಕಾಂಗ್ರೆಸ್ ನ ಆಂತರಿಕ ವೈರುಧ್ಯಗಳನ್ನು, ಗೊಂದಲಗಳನ್ನು, ದ್ವಂದ್ವವನ್ನು ಮೀರಿ ನಿಂತ, ತಾನು ಯಾವ ಸಿದ್ಧಾಂತವನ್ನು ಅನುಸರಿಸಬೇಕು, ಯಾವ ಸಿದ್ಧಾಂತದ ವಿರುದ್ಧ ಹೋರಾಡಬೇಕು ಎಂಬುದರ ಬಗ್ಗೆ ಅತ್ಯಂತ ಸ್ಪಷ್ಟ ನಿಲುವು ತಳೆದಿರುವ ರಾಹುಲ್ ಗಾಂಧಿ.

ಪಕ್ಷದ ಪಟ್ಟಭದ್ರ ನಾಯಕರ ಹಂಗಿನಿಂದ ಅವರು ಹೊರ ಬಂದಿದ್ದಾರೆ. ತನ್ನ ಹೋರಾಟದ ಹಾದಿಯಲ್ಲಿ ಹೊರಟಿದ್ದಾರೆ.

ಅವರನ್ನು ಈ ಹಾದಿಯಲ್ಲಿ, ಹೋರಾಟದಲ್ಲಿ ಬಿಜೆಪಿಗಿಂತ ಮೊದಲು ಸೋಲಿಸಲು ಹೊರಡೋದು ಅವರದೇ ಪಕ್ಷ. ಹಾಗಾಗಿ ಮೊದಲು ಅವರ ಪಕ್ಷದೊಳಗಿನ ಮೃದು ಹಿಂದುತ್ವವಾದಿಗಳ ವಿರುದ್ಧ ಹೋರಾಡಿ ಗೆಲ್ಲಬೇಕಾದ ಅನಿವಾರ್ಯತೆಯಿದೆ. ಅದು ಸಾಧ್ಯವೇ ? ಕಾದು ನೋಡಬೇಕು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!