ಮಧ್ಯಪ್ರದೇಶ: ಪಟಾಕಿ ಫ್ಯಾಕ್ಟರಿ ದುರಂತ; ಅಂಗವಿಕಲ ತಂದೆಯ ಪ್ರಾಣ ಉಳಿಸಿದ ಒಂಬತ್ತರ ಬಾಲಕ ಮೃತ್ಯು
ಭೋಪಾಲ್: ಮಧ್ಯಪ್ರದೇಶದ ಹರ್ದಾ ಪಟಾಕಿ ಫ್ಯಾಕ್ಟರಿಯಲ್ಲಿ ಸಂಭವಿಸಿದ ದುರಂತದಲ್ಲಿ ತನ್ನ ಪ್ರಾಣವನ್ನು ಲೆಕ್ಕಿಸದೇ ವ್ಹೀಲ್ ಚೇರ್ ನಲ್ಲಿದ್ದ ತಂದೆಯನ್ನು ಸುರಕ್ಷಿತ ಜಾಗಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದ್ದ ಒಂಬತ್ತು ವರ್ಷದ ಬಾಲಕ ಶುಕ್ರವಾರ ಸಂಜೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಬಾಲಕ ಆಶೀಶ್ ಹಾಗೂ ಆತನ ತಂದೆ ಸಂಜಯ್ ರಜಪೂತ್ ಅವರು ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಿಂದ ಸಿಡಿದ ಕಾಂಕ್ರೀಟ್ ತುಂಡುಗಳು ಬಡಿದು ಗಾಯಗೊಂಡಿದ್ದರು. ತಂದೆಯನ್ನು ಸುರಕ್ಷಿತ ಜಾಗಕ್ಕೆ ಕರೆದೊಯ್ಯುವ ಪ್ರಯತ್ನದಲ್ಲಿ ಬಾಲಕ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಭೋಪಾಲ್ ಎಐಐಎಂಎಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೇರಿದೆ.
ತಮ್ಮ ಎರಡೂ ಕಾಲುಗಳನ್ನು ಬಳಸಲಾಗದ ಸ್ಥಿತಿಯಲ್ಲಿರುವ ಸಂಜಯ್, ಪಟಾಕಿ ಫ್ಯಾಕ್ಟರಿಯ ಹೊರಭಾಗದಲ್ಲಿ ಪಾನ್ ಶಾಪ್ ನಡೆಸುತ್ತಿದ್ದರು. ಇವರ ಪತ್ನಿ ಹಾಗೂ ಪುತ್ರಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ಫೋಟವಾದಾಗ ಬಾಲಕ ಆಶೀಶ್ ಶಾಲೆಗೆ ಹೋಗಲು ಸಜ್ಜಾಗುತ್ತಿದ್ದ. ಆರಂಭದಲ್ಲೇ ತಾಯಿ ಹಾಗೂ ಮಗಳು ತಪ್ಪಿಸಿಕೊಂಡರು. ಆಗ ಆಶೀಶ್ ತಂದೆಯನ್ನು ರಕ್ಷಿಸಲು ಓಡೋಡಿ ಬಂದ. ತನ್ನ ಪುಟ್ಟ ಕೈಗಳಿಂದ ವ್ಹೀಲ್ಚೇರ್ ತಳ್ಳುತ್ತಿದ್ದಾಗ ಇಬ್ಬರಿಗೂ ಕಾಂಕ್ರಿಟ್ ತುಂಡುಗಳು ಬಡಿದು ತೀವ್ರ ಗಾಯಗಳಾಗಿದ್ದವು ಎಂದು ನೆರೆಮನೆಯ ಜಿತೇಂದ್ರ ಸೈನಿ ವಿವರಿಸಿದ್ದಾರೆ.
8 ಮಂದಿ ಗಾಯಾಳುಗಳು ಎಐಐಎಂಎಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 27 ಮಂದಿ ಹಮೀದಿಯಾ ಆಸ್ಪತ್ರೆಯಲ್ಲಿದ್ದಾರೆ.