ದಿಲ್ಲಿ ವಿವಿಯ ಶಹೀದ್ ಭಗತ್ ಸಿಂಗ್ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ದಲಿತ ವಿದ್ಯಾರ್ಥಿಯಿಂದ ಜಾತಿ ನಿಂದನೆ, ಹಲ್ಲೆ ಆರೋಪ
ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಶಹೀದ್ ಭಗತ್ ಸಿಂಗ್ ಕಾಲೇಜಿನ ದಲಿತ ವಿದ್ಯಾರ್ಥಿಯೋರ್ವರು ಪ್ರಾಂಶುಪಾಲರು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ವಿದ್ಯಾರ್ಥಿಯ ಆರೋಪವನ್ನು ಪ್ರಾಂಶುಪಾಲ ಅರುಣ್ ಕುಮಾರ್ ಅತ್ರಿ ತಳ್ಳಿ ಹಾಕಿದ್ದು, ನಕಲಿ ಪ್ರಮಾಣಪತ್ರದ ನೀಡಿ ನೇಮಕಾತಿ ಮತ್ತು ಬಡ್ತಿ ಪಡೆದುಕೊಂಡು ವಿಚಾರಣೆ ಎದುರಿಸುತ್ತಿರುವ ಅಧ್ಯಾಪಕರೋರ್ವರ ಕುಮ್ಮಕ್ಕಿನಿಂದ ಈ ಆರೋಪವನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಯ ಆರೋಪದ ಬೆನ್ನಲ್ಲೇ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಪ್ರಾಂಶುಪಾಲರ ರಾಜೀನಾಮೆಗೆ ಒತ್ತಾಯಿಸಿ ಜೆಎನ್ ಯು ಸೇರಿದಂತೆ ಕೆಲ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಮೂರನೇ ವರ್ಷದ ಬಿಎ ವಿದ್ಯಾರ್ಥಿ ಈ ಆರೋಪವನ್ನು ಮಾಡಿದ್ದು, ಘಟನೆಯು ನನಗೆ ಮಾನಸಿಕ ಆಘಾತವನ್ನುಂಟುಮಾಡಿದೆ ಎಂದು ಹೇಳಿದ್ದಾರೆ. ಈ ಕುರಿತು ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ವಿಶ್ವವಿದ್ಯಾನಿಲಯದ ಉಪಕುಲಪತಿಗೆ ಮತ್ತು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೂ ಪತ್ರ ಬರೆದಿದ್ದಾರೆ.
ಅಕ್ಟೋಬರ್ 24ರಂದು ಸಹಪಾಠಿಯೊಬ್ಬರ ಫೋನ್ ಹ್ಯಾಕ್ ಆಗಿದೆ ಮತ್ತು ಅಶ್ಲೀಲ ವೀಡಿಯೊಗಳ ಲಿಂಕ್ ಗಳು ಸೇರಿದಂತೆ ಆಕ್ಷೇಪಾರ್ಹ ಸಂದೇಶಗಳು ವಿಭಾಗದ ವಾಟ್ಸಾಪ್ ಗ್ರೂಪ್ ನಲ್ಲಿ ಹಂಚಿಕೊಳ್ಳಲಾಗಿದೆ. ನಾನು ಸಹಪಾಠಿಯ ಫೋನ್ ನ್ನು ಸರಿಪಡಿಸಲು ಸಹಾಯ ಮಾಡಿದೆ. ಆದರೆ, ಪ್ರಾಂಶುಪಾಲರು ಈ ಕುರಿತು ನಡೆಸಿದ ತನಿಖೆಯಲ್ಲಿ ಕೆಲ ವಿದ್ಯಾರ್ಥಿಗಳು ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಸಂಪೂರ್ಣ ಸಹಕಾರದ ಹೊರತಾಗಿಯೂ, ನನ್ನ ಸಮ್ಮತಿಯಿಲ್ಲದೆ ನನ್ನ ಫೋನ್ ನ್ನು ಪರಿಶೀಲನೆ ನಡೆಸಿದ್ದಾರೆ. ಇದು ನನ್ನ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದೆ. ಕೆಲವು ಶಿಕ್ಷಕರು ಆರೋಪಗಳನ್ನು ಒಪ್ಪಿಕೊಳ್ಳುವಂತೆ ನನಗೆ ಒತ್ತಡ ಹೇರಿದ್ದಾರೆ. ನಾನು ಸುಳ್ಳು ಆರೋಪಗಳನ್ನು ಸ್ವೀಕರಿಸಲು ನಿರಾಕರಿಸಿದಾಗ ಪ್ರಾಂಶುಪಾಲ ಅರುಣ್ ಕುಮಾರ್ ಅತ್ರಿ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾರೆ.