ಪತ್ನಿಯನ್ನು ಉದ್ಯೋಗ ತೊರೆಯುವಂತೆ ಒತ್ತಾಯಿಸುವುದು ಕ್ರೌರ್ಯ: ಮಧ್ಯಪ್ರದೇಶ ಹೈಕೋರ್ಟ್
ಭೋಪಾಲ್: ಪತಿಯ ಆದ್ಯತೆ ಮತ್ತು ಜೀವನಶೈಲಿಗೆ ಅನುಗುಣವಾಗಿ ಹೆಂಡತಿ ತನ್ನ ಉದ್ಯೋಗ ತೊರೆಯುವಂತೆ ಒತ್ತಾಯಿಸುವುದು ಕ್ರೌರ್ಯವನ್ನು ಸೂಚಿಸುತ್ತದೆ ಮತ್ತು ಅದು ವಿಚ್ಛೇದನಕ್ಕೆ ಕಾರಣವನ್ನು ನೀಡುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಸುರೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಸುಶ್ರೂರ್ ಧರ್ಮಾಧಿಕಾರಿ ಅವರ ವಿಭಾಗೀಯ ಪೀಠವು, ವೈಯಕ್ತಿಕ ಆಯ್ಕೆಗಳ ಆಧಾರದ ಮೇಲೆ ಇನ್ನೊಬ್ಬರ ಉದ್ಯೋಗ ನಿರ್ಧಾರಗಳನ್ನು ನಿರ್ದೇಶಿಸುವ ಹಕ್ಕು ಯಾವುದೇ ಸಂಗಾತಿಗೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಒಟ್ಟಿಗೆ ವಾಸಿಸುವ ನಿರ್ಧಾರವು ಪರಸ್ಪರ ಸಮ್ಮತದಿಂದಿರಬೇಕು ಮತ್ತು ಬಲವಂತ ರಹಿತವಾಗಿರಬೇಕು ಎಂದು ಪೀಠವು ಗಮನಿಸಿದೆ.
ಇಂದೋರ್ ನ ಕೌಟುಂಬಿಕ ನ್ಯಾಯಾಲಯದ ತೀರ್ಪಿನ ವಿರುದ್ಧ ಮಹಿಳೆಯೋರ್ವರು ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿ ನ್ಯಾಯಾಲಯ ಈ ತೀರ್ಪು ನ್ನು ನೀಡಿದೆ. 2014ರ ಏಪ್ರಿಲ್ ನಲ್ಲಿ ದಂಪತಿಗಳಿಬ್ಬರು ವಿವಾಹವಾಗಿದ್ದರು. 2017ರಿಂದ ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಪತ್ನಿಗೆ ಉದ್ಯೋಗ ಸಿಕ್ಕಿತ್ತು. ತನ್ನ ನಿರುದ್ಯೋಗಿ ಪತಿ ಸರ್ಕಾರಿ ಕೆಲಸವನ್ನು ಬಿಟ್ಟು ಉದ್ಯೋಗವನ್ನು ಪಡೆಯುವವರೆಗೂ ಅವನೊಂದಿಗೆ ವಾಸಿಸುವಂತೆ ನನ್ನನ್ನು ಒತ್ತಾಯಿಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. ಪತಿಯ ಮಾನಸಿಕ ಕಿರುಕುಳದ ಹಿನ್ನೆಲೆ ಆಕೆ ಪ್ರತ್ಯೇಕವಾಗಿ ವಾಸಿಸಲು ಮತ್ತು ವಿಚ್ಛೇದನ ಪಡೆಯಲು ಬಯಸಿದ್ದರು.
ಬಲವಂತ ಮತ್ತು ಹೊಂದಾಣಿಕೆಯ ಸಮಸ್ಯೆಗಳಿಂದಾಗಿ ವಿಚ್ಛೇದನದ ಮನವಿ ಸೇರಿದಂತೆ ನಿರ್ಣಾಯಕ ಅಂಶಗಳನ್ನು ಕೌಟುಂಬಿಕ ನ್ಯಾಯಾಲಯವು ಕಡೆಗಣಿಸಿದೆ ಎಂದು ಹೈಕೋರ್ಟ್ ಗಮನಿಸಿದೆ. ಪತ್ನಿಯ ಸ್ಪಷ್ಟ ಉದ್ದೇಶಗಳ ಹೊರತಾಗಿಯೂ ಪತಿ ಪರಸ್ಪರ ವಿಚ್ಛೇದನಕ್ಕೆ ಒಪ್ಪಿಗೆ ನಿರಾಕರಿಸುವುದು ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಪೀಠವು ಗಮನಿಸಿದೆ.