ವಾಯು ಮಾಲಿನ್ಯದಿಂದಾಗಿ ಉತ್ತರ ಭಾರತ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸುತ್ತಿದೆ : ದಿಲ್ಲಿ ಸಿಎಂ ಅತಿಶಿ ಆತಂಕ
ಹೊಸದಿಲ್ಲಿ: ಕೂಳೆಯ ದಹನದಿಂದ ಉಂಟಾಗಿರುವ ಅಪಾಯಕಾರಿ ವಾಯು ಮಾಲಿನ್ಯದಿಂದ ಉತ್ತರ ಭಾರತವು ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸುತ್ತಿದೆ ಎಂದು ಸೋಮವಾರ ದಿಲ್ಲಿ ಮುಖ್ಯಮಂತ್ರಿ ಅತಿಶಿ ಆತಂಕ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅತಿಶಿ, ಬಿಜೆಪಿ ಆಡಳಿತಾರೂಢ ರಾಜ್ಯಗಳಾದ ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿನ ಕೂಳೆ ದಹನವನ್ನು ನಿಯಂತ್ರಿಸುವ ಕ್ರಮ ಕೈಗೊಳ್ಳುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ಆಪ್ ನೇತೃತ್ವದ ಪಂಜಾಬ್ ಸರಕಾರವನ್ನು ಶ್ಲಾಘಿಸಿದ ಅವರು, ಪಂಜಾಬ್ ರಾಜ್ಯದಲ್ಲಿ ಕೂಳೆ ದಹನವು ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಬಿಜೆಪಿ ಆಡಳಿತಾರೂಢ ರಾಜ್ಯಗಳಲ್ಲಿ ಏರಿಕೆಯಾಗಿದೆ ಎಂದು ಹೇಳಿದರು.
ದಿಲ್ಲಿಯ ವಾಯು ಗುಣಮಟ್ಟವು ಹದಗೆಟ್ಟಿರುವುದರಿಂದ, ವೃದ್ಧರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದ್ದು, ಮಕ್ಕಳಿಗೆ ಉಸಿರಾಡಲು ಇನ್ಹೇಲರ್ ಗಳು ಹಾಗೂ ಸ್ಟಿರಾಯ್ಡ್ ಗಳನ್ನು ನೀಡಬೇಕಾಗಿ ಬರುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸೋಮವಾರ ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕವು 484ಕ್ಕೆ ಕುಸಿಯುವ ಮೂಲಕ ನಗರದ ವಾಯು ಗುಣಮಟ್ಟವನ್ನು ತೀರಾ ಗಂಭೀರ ಪ್ರವರ್ಗಕ್ಕೆ ಸೇರ್ಪಡೆ ಮಾಡಲಾಗಿದೆ. ಇದರ ಬೆನ್ನಿಗೇ, ಇಂದು ಬೆಳಗ್ಗೆಯಿಂದ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಟ್ರಕ್ ಗಳು ನಗರ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಯೋಜನೆಗಳ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ.
ಈ ನಡುವೆ, ಸೋಮವಾರ ಬೆಳಗ್ಗೆ ದಟ್ಟ ಮಲಿನಕಾರಿ ಮಂಜು ಮುಸುಕಿದ್ದುದರಿಂದ ಗೋಚರತೆಯ ಪ್ರಮಾಣವು ತೀವ್ರವಾಗಿ ಇಳಿಕೆಯಾಗಿತ್ತು.