ನೀತಿ ಸಂಹಿತೆ ಉಲ್ಲಂಘಿಸಿರುವ ವೀಡಿಯೊವನ್ನು ತೆಗೆಯಲು ಜಾರ್ಖಂಡ್ ಬಿಜೆಪಿಗೆ ಚುನಾವಣಾ ಆಯೋಗದ ನಿರ್ದೇಶನ
ಹೊಸದಿಲ್ಲಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿರುವ ಪ್ರಚಾರ ವೀಡಿಯೊ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಹೇಳಿರುವ ಚುನಾವಣಾ ಆಯೋಗವು, ಅದನ್ನು ತೆಗೆದುಹಾಕುವಂತೆ ಪಕ್ಷಕ್ಕೆ ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ಮಿತ್ರಪಕ್ಷಗಳಾಗಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಕಾಂಗ್ರೆಸ್ ಸಲ್ಲಿಸಿದ್ದ ದೂರಿನ ಮೇರೆಗೆ ಆಯೋಗವು ಈ ಕ್ರಮವನ್ನು ತೆಗೆದುಕೊಂಡಿದೆ. ವೀಡಿಯೊ ಧಾರ್ಮಿಕ ಸಮುದಾಯವೊಂದರ ಕುರಿತು ಸುಳ್ಳು ನಿರೂಪಣೆಯನ್ನು ಒಳಗೊಂಡಿದೆ ಎಂದು ಈ ಪಕ್ಷಗಳು ಆರೋಪಿಸಿದ್ದವು.
ಶನಿವಾರ ರಾತ್ರಿ ಜಾರ್ಖಂಡ್ ಬಿಜೆಪಿಯ ಹ್ಯಾಂಡಲ್‌ಗಳಲ್ಲಿ ಪೋಸ್ಟ್ ಮಾಡಲಾದ ವೀಡಿಯೊ, ಮುಸ್ಲಿಮ್ ಸಮುದಾಯದ ಸದಸ್ಯರಂತೆ ಕಂಡು ಬರುವ ದೊಡ್ಡ ಗುಂಪೊಂದು ಜೆಎಂಎಂ ಬೆಂಬಲಿಗನ ಮನೆಯನ್ನು ಪ್ರವೇಶಿಸುತ್ತಿರುವುದನ್ನು ತೋರಿಸಿದೆ.
ಬಾಂಗ್ಲಾದೇಶಿಯರು ಮದ್ರಸಗಳ ಮೂಲಕ ಜಾರ್ಖಂಡ್ ಪ್ರವೇಶಿಸುತ್ತಿದ್ದಾರೆ ಮತ್ತು ಸ್ಥಳೀಯರ ಆಸ್ತಿಗಳನ್ನು ಕಬಳಿಸುತ್ತಿದ್ದಾರೆ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ.
‘ತಪ್ಪು ಮತದಾನ ಎಷ್ಟೊಂದು ದೊಡ್ಡ ಪ್ರಮಾದಕ್ಕೆ ಕಾರಣವಾಗಬಹುದು ಎನ್ನುವುದನ್ನು ಎಚ್ಚರಿಕೆಯಿಂದ ನೋಡಿ. 2019ರಲ್ಲಿ ಮಾಡಿದ್ದ ತಪ್ಪನ್ನು ಈ ಸಲವೂ ಮಾಡಬೇಡಿ. ಸರಿಯಾದದ್ದನ್ನೇ ಆಯ್ಕೆ ಮಾಡಿ,ಬಿಜೆಪಿಯನ್ನೇ ಆಯ್ಕೆ ಮಾಡಿ’ ಎಂಬ ಅಡಿಬರಹ ವೀಡಿಯೊದಲ್ಲಿದೆ.
ಪ್ರಸ್ತಾವಿತ ವೀಡಿಯೊವನ್ನು ತಕ್ಷಣ ತೆಗೆಯುವಂತೆ ಸಾಮಾಜಿಕ ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ಚುನಾವಣಾ ಆಯೋಗವು ರವಿವಾರ ಜಾರ್ಖಂಡ್‌ನ ಮುಖ್ಯ ಚುನಾವಣಾಧಿಕಾರಿ ಕೆ.ರವಿಕುಮಾರ್‌ಗೆ ಸೂಚಿಸಿದೆ. ಜಾರ್ಖಂಡ್ ಬಿಜೆಪಿಯಿಂದ ವಿವರಣೆಯನ್ನು ಪಡೆಯುವಂತೆಯೂ ಅವರಿಗೆ ನಿರ್ದೇಶನ ನೀಡಲಾಗಿದೆ.
ಚುನಾವಣಾ ಆಯೋಗದ ನಿರ್ದೇಶನಗಳ ಮೇರೆಗೆ ಪೋಲಿಸರೂ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಕುಮಾರ ಸುದ್ದಿಸಂಸ್ಥೆಗೆ ತಿಳಿಸಿದರು.
ಇಷ್ಟಾದ ಬಳಿಕ ಬಿಜೆಪಿ ವೀಡಿಯೊವನ್ನು ಅಳಿಸಿದೆ.
ಶನಿವಾರ ವೀಡಿಯೊ ಪೋಸ್ಟ್ ಮಾಡಿದ ಬೆನ್ನಲ್ಲೇ ಎಕ್ಸ್‌ನಲ್ಲಿ ಆಕ್ಷೇಪವನ್ನು ವ್ಯಕ್ತಪಡಿಸಿದ್ದ ಜೆಎಂಎಂ, ಅದನ್ನು ಚುನಾವಣಾ ಆಯೋಗಕ್ಕೆ ಟ್ಯಾಗ್ ಮಾಡಿತ್ತು.
‘ಹಿಂದೂ ಮತ್ತು ಮುಸ್ಲಿಮರ ಹೆಸರಿನಲ್ಲಿ ದೇಶದ ಅವನತಿಗೆ ನೀವು ಇನ್ನೂ ಎಷ್ಟು ಕಾಲ ಅವಕಾಶ ನೀಡುತ್ತೀರಿ. ಈಗ ಸ್ವಲ್ಪ ನಾಚಿಕೆ ಪಡಿ ಮತ್ತು ಎದ್ದೇಳಿ. ಸ್ವಲ್ಪ ಧೈರ್ಯವನ್ನು ತೋರಿಸಿ. ಇಂದು ಬಿಜೆಪಿ ಲಜ್ಜೆಗೇಡಿತನ ಮತ್ತು ಅಸಭ್ಯತೆಯ ಎಲ್ಲ ಮಿತಿಗಳನ್ನೂ ದಾಟಿದೆ ’ಎಂದು ಜೆಎಂಎಂ ಪೋಸ್ಟ್‌ನಲ್ಲಿ ಹೇಳಿತ್ತು. ಪಕ್ಷವು ವೀಡಿಯೊದ ವಿರುದ್ಧ ಕುಮಾರ್‌ಗೆ ದೂರನ್ನೂ ಸಲ್ಲಿಸಿತ್ತು.
ಅತ್ತ ಕಾಂಗ್ರೆಸ್ ವೀಡಿಯೊವನ್ನು ಅಳಿಸಲು ಮತ್ತು ಎಫ್‌ಐಆರ್ ದಾಖಲಿಸಲು ಆದೇಶವನ್ನು ಕೋರಿ ದಿಲ್ಲಿಯಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು.
ಬಿಜೆಪಿಯ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಎಲ್ಲ ಕೋಮು,ವಿಭಜಕ ಮತ್ತು ದುರುದ್ದೇಶಪೂರಿತ ವಿಡಿಯೊಗಳನ್ನು ಅಳಿಸುವಂತೆಯೂ ಕಾಂಗ್ರೆಸ್ ಆಯೋಗವನ್ನು ಕೋರಿದೆ.