ಡೆಹ್ರಾಡೂನ್: ಹಿಂದುತ್ವ ಗುಂಪಿನಿಂದ ‘ಜೈ ಶ್ರೀರಾಮ್’ ಪೋಸ್ಟರ್ ಕುರಿತು ವ್ಯಾಪಾರಿಗಳಿಗೆ ಕಿರುಕುಳ
ಡೆಹ್ರಾಡೂನ್: ಹಿಂದುತ್ವ ಬೆಂಬಲಿಗರ ಗುಂಪೊಂದು ಇಲ್ಲಿಯ ಅಂಗಡಿಯೊಂದರ ಸಿಬ್ಬಂದಿಗೆ ಕಿರುಕುಳ ನೀಡಿದ ಮತ್ತು ಶ್ರೀರಾಮನ ಚಿತ್ರವಿದ್ದ ಪೋಸ್ಟರನ್ನು ಪ್ರದರ್ಶಿಸಿದ್ದನ್ನು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಉತ್ತರಾಖಂಡ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಬುಧವಾರ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿತ್ತು. ಕೆಲವು ಹಿಂದುತ್ವ ಬೆಂಬಲಿಗರು ‘ಜೈ ಶ್ರೀರಾಮ್’ ಎಂದು ಬರೆಯಲಾಗಿದ್ದ ಪೋಸ್ಟರಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದನ್ನು ಮತ್ತು ಇಬ್ಬರು ವ್ಯಕ್ತಿಗಳು ತಾವು ಅಂಗಡಿಯ ಮಾಲಿಕರಲ್ಲ, ಇಲ್ಲಿ ಕೆಲಸ ಮಾಡುತ್ತಿದ್ದೇವೆ ಅಷ್ಟೇ ಎಂದು ವಿವರಿಸುತ್ತಿರುವುದನ್ನು ವೀಡಿಯೊ ತೋರಿಸಿದೆ. ಕೆಲವು ಹಿಂದುತ್ವ ಬೆಂಬಲಿಗರು ಪೋಸ್ಟರನ್ನು ಕಿತ್ತು ಹಾಕಿದ್ದನ್ನೂ ವೀಡಿಯೊ ತೋರಿಸಿದೆ.
ರಾಕೇಶ ಬೋರಾಯ್ ಎಂಬಾತ ಅಮನ್ ಜನರಲ್ ಸ್ಟೋರ್ ಹೆಸರಿನ ಅಂಗಡಿಯ ಮಾಲಿಕನಾಗಿದ್ದು, ಅದನ್ನು ಗಿರೀಶ ಎಂಬ ವ್ಯಕ್ತಿಗೆ ಬಾಡಿಗೆ ನೀಡಿದ್ದಾನೆ. ಅಂಗಡಿಯನ್ನು ನೋಡಿಕೊಳ್ಳಲು ಗಿರೀಶ, ಮುಹಮ್ಮದ್ ಅಯೂಬ್ ಖಾನ್ ಎಂಬ ವ್ಯಕ್ತಿಯನ್ನು ನೇಮಿಸಿಕೊಂಡಿದ್ದ ಎಂದು ಪೋಲಿಸರು ತಿಳಿಸಿದ್ದಾರೆ.
ಪೋಲಿಸರ ಪ್ರಕಾರ ಜ.9ರಂದು ರಾಧಾ ಧೋನಿ ಎಂಬ ಮಹಿಳೆ ಮತ್ತು ಆಕೆಯ ಬೆಂಬಲಿಗರು ಬಲವಂತದಿಂದ ಪೋಸ್ಟರನ್ನು ಕಿತ್ತು ಹಾಕಿದ್ದರು ಮತ್ತು ಕೋಮುವಾದಿ ನಿಂದನೆಗಳನ್ನು ಮಾಡಿದ್ದರು. ದೋನಿ ಮತ್ತು ಇತರರ ವಿರುದ್ಧ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮುಸ್ಲಿಮ್ ನಿಯೋಗವೊಂದು ಜಿಲ್ಲಾ ಪೋಲಿಸ್ ಅಧೀಕ್ಷಕರನ್ನು ಭೇಟಿಯಾಗಿ ಮುಸ್ಲಿಮ್ ವ್ಯಾಪಾರಿಗೆ ಕಿರುಕುಳ ನೀಡಿದ್ದಕ್ಕಾಗಿ ಕಠಿಣ ಕ್ರಮವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದೆ ಎಂದು ತಿಳಿಸಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅಕಿಬ್ ಕುರೇಶಿ ಅವರು,ಆಗಾಗ್ಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಪ್ರತಿಯೊಬ್ಬರೂ ಶಾಂತಿಯಿಂದ ಬದುಕುವಂತಾಗಲು ಇಂತಹ ಉಗ್ರವಾದಿ ಗುಂಪುಗಳ ವಿರುದ್ಧ ಪೋಲಿಸರು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.