ದೆಹಲಿ ಚಲೋ ಪಾದಯಾತ್ರೆ ಇಂದು ಪುನರಾರಂಭ: ಸಂಚಾರ ಅಸ್ತವ್ಯಸ್ತ
ಹೊಸದಿಲ್ಲಿ: ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಖಾತರಿ ನೀಡುವ ಕಾನೂನು ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ನ ಸಾವಿರಾರು ರೈತರು ಬುಧವಾರ ತಮ್ಮ ದೆಹಲಿ ಚಲೋ ಯಾತ್ರೆಯನ್ನು ಪುನರಾರಂಭಿಸಲಿದ್ದಾರೆ.
ಹರ್ಯಾಣ- ಪಂಜಾಬ್ ಶಂಭು ಗಡಿಯಲ್ಲಿ ಠಿಕಾಣಿ ಹೂಡಿರುವ ರೈತರು, ಮಂಗಳವಾರ ಕೇಂದ್ರ ಸರ್ಕಾರದ ಜತೆಗಿನ ನಾಲ್ಕನೇ ಸುತ್ತಿನ ಮಾತುಕತೆ ವಿಫಲವಾದ ಬೆನ್ನಲ್ಲೇ ಪ್ರತಿಭಟನೆ ಪುನರಾರಂಭಿಸುವುದಾಗಿ ಘೋಷಿಸಿದ್ದರು.
ಪ್ರತಿಭಟನಾನಿರತ ರೈತರನ್ನು ತಡೆಯಲು ಭದ್ರತಾ ಚೆಕ್ ಪಾಯಿಂಟ್ ಗಳನ್ನು ಪೊಲೀಸರು ವ್ಯವಸ್ಥೆಗೊಳಿಸಿದ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಗೆ ಧಕ್ಕೆಯಾಗಲಿದ್ದು,ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಪರಿಣಾಮವಾಗಲಿದೆ.
ಶಂಭು ಗಡಿಯಲ್ಲಿ ಸುಮಾರು 14 ಸಾವಿರ ರೈತರು ಜಮಾಯಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿದ್ದು, 1200 ಟ್ರ್ಯಾಕ್ಟರ್ ಟ್ರಾಲಿಗಳು, 300 ಕಾರುಗಳು ಹಾಗೂ 10 ಮಿನಿ ಬಸ್ ಗಳು ಆಗಮಿಸಿವೆ. 500 ಟ್ರ್ಯಾಕ್ಟರ್ ಗಳನ್ನು ಹೊಂದಿದ 4500 ಮಂದಿಗೆ ಧಬಿ-ಗುಜ್ರನ್ ತಡೆಯ ಬಳಿ ಸಮಾವೇಶಗೊಳ್ಳಲು ಅವಕಾಶ ನೀಡಲಾಗಿದೆ.
ಈ ಮಧ್ಯೆ ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಪರಿಸ್ಥಿತಿ ಹದಗೆಡುತ್ತಿರುವುದು ಕಳವಳಕಾರಿ ಎಂದು ಗೃಹ ಸಚಿವಾಲಯ ಆತಂಕ ವ್ಯಕ್ತಪಡಿಸಿದೆ. ರೈತರ ಹೆಸರಿನಲ್ಲಿ ಹಲವು ಮಂದಿ ಕಿಡಿಗೇಡಿಗಳು ಕಲ್ಲುತೂರಾಟ, ದೊಡ್ಡ ಮೆಷಿನರಿಗಳನ್ನು ಜಮಾಯಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆಪಾದಿಸಿದೆ. ಟ್ರ್ಯಾಕ್ಟರ್, ಜೆಸಿಬಿ ಹಾಗೂ ಇತರ ಘನ ಸಾಧನಗಳ ಬಳಕೆಗೆ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ.
ಬೇಳೆಕಾಳುಗಳು, ಮೆಕ್ಕೆಜೋಳ ಹಾಗೂ ಹತ್ತಿಯನ್ನು ಸರ್ಕಾರಿ ಏಜೆನ್ಸಿ ಮೂಲಕ ಐದು ವರ್ಷಗಳ ಅವಧಿಗೆ ಖರೀದಿಸುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ಪ್ರತಿಭಟನಾ ನಿರತ ರೈತರು ಸೋಮವಾರ ತಿರಸ್ಕರಿಸಿದರು.