ದೆಹಲಿ ಎನ್ ಸಿ ಆರ್: ದಾಖಲೆ ಮಳೆಗೆ ಜನಜೀವನ ಅಸ್ತವ್ಯಸ್ತ, 6 ಮಂದಿ ಮೃತ್ಯು

Update: 2023-07-10 02:32 GMT

Photo: Times Of India

ಹೊಸದಿಲ್ಲಿ: ಕಳೆದ ಎರಡು ದಿನಗಳಲ್ಲಿ ರಾಷ್ಟ್ರ ರಾಜಧಾನಿ ಪ್ರದೇಶ ಮತ್ತು ಗುರುಗ್ರಾಮದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಸಂಬಂಧಿ ಅನಾಹುತಗಳಿಗೆ ಆರು ಜೀವಗಳು ಬಲಿಯಾಗಿರುವ ಬಗ್ಗೆ ವರದಿಯಾಗಿದೆ.

ಎರಡು ದಿನಗಳ ಅವಧಿಯಲ್ಲಿ 41 ವರ್ಷಗಳಲ್ಲೇ ಗರಿಷ್ಠ ಮಳೆ ಬಿದ್ದ ಪರಿಣಾಮವಾಗಿ ರಸ್ತೆಗಳು ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿ ಹಲವು ಕಡೆ ಮನೆಗಳು ಕುಸಿದಿವೆ. ರಸ್ತೆಗಳಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು, ಮರಗಳು ಬುಡಮೇಲಾಗಿವೆ.

ರವಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ ಸಫ್ದರ್ಜಂಗ್ನಲ್ಲಿ 153 ಮಿಲಿಮೀಟರ್ ಮಳೆ ದಾಖಲಾಗಿದ್ದು, ಇದು 1982ರ ಬಳಿಕ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಮಳೆ ಪ್ರಮಾಣವಾಗಿದೆ. ಬಳಿಕ ಒಂಬತ್ತು ಗಂಟೆಗಳಲ್ಲಿ ಮತ್ತೆ 105.8 ಮಿಲೀಟರ್ ಮಳೆ ಬಿದ್ದಿದೆ. ನಿರಂತರ ಎರಡು ದಿನಗಳ ಕಾಲ 100 ಮಿಲಿಮೀಟರ್ಗಿಂತ ಅಧಿಕ ಮಳೆ ಬಿದ್ದಿರುವುದು ಇದೇ ಮೊದಲು ಎನ್ನಲಾಗಿದೆ.

ದೆಹಲಿಯಲ್ಲಿ 36 ಗಂಟೆ ಅವಧಿಯಲ್ಲಿ 260 ಮಿಲಿಮೀಟರ್ ಮಳೆ ಬಿದ್ದಿದ್ದು, ಇದು ಇಡೀ ಜುಲೈ ತಿಂಗಳಲ್ಲಿ ಆಗುವ ಮಳೆಯ ಪ್ರಮಾಣಕ್ಕಿಂತಲೂ ಶೇಕಡ 32ರಷ್ಟು ಅಧಿಕ. ಸೋಮವಾರ ಕೂಡಾ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ದೆಹಲಿಯಲ್ಲಿ ಪ್ರತ್ಯೇಕ ಮನೆ ಕುಸಿತ ಘಟನೆಗಳಲ್ಲಿ, ಗೋಡೆ ಕುಸಿತ ಹಾಗೂ ಮರಗಳು ಬಿದ್ದ ಪರಿಣಾಮ ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದಾರೆ. 13 ಕಡೆ ಮನೆ ಕುಸಿದ ಬಗ್ಗೆ ದೆಹಲಿ ಅಗ್ನಿಶಾಮಕ ದಳಕ್ಕೆ ಕರೆ ಬಂದಿದ್ದು, ಈ ಪ್ರಕರಣಗಳಲ್ಲಿ ಏಳು ಮಂದಿಯನ್ನು ರಕ್ಷಿಸಲಾಗಿದೆ. ಮೂರು ಮಂದಿ ಮೃತಪಟ್ಟಿದ್ದಾರೆ. ಆಟೊರಿಕ್ಷಾ ಮೇಲೆ ಮರ ಬಿದ್ದು ಸಂಭವಿಸಿದ ದುರಂತದಲ್ಲಿ ಚಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಗುರುಗ್ರಾಮದಲ್ಲಿ ಕಳೆದ 24 ಗಂಟೆಗಳಲ್ಲಿ 145 ಮಿಲಿಮೀಟರ್ ಮಳೆಯಾಗಿದ್ದು, ಕೆರೆಯೊಂದರಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ನೀರು ಪಾಲಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News