ದಿಲ್ಲಿಯಲ್ಲಿ ಸಂಭಲ್ ಹಿಂಸಾಚಾರ ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿ ಮಾಡಿದ ರಾಹುಲ್, ಪ್ರಿಯಾಂಕ

Update: 2024-12-10 16:18 GMT

Photo | @INCIndia/X

ಹೊಸದಿಲ್ಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಸಂಜೆ ದಿಲ್ಲಿಯಲ್ಲಿ ಸಂಭಲ್ ಹಿಂಸಾಚಾರ ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ.

ಸಂಭಲ್ ಹಿಂಸಾಚಾರ ಸಂತ್ರಸ್ತರ ಕುಟುಂಬಗಳನ್ನು ದಿಲ್ಲಿಯಲ್ಲಿನ ಸೋನಿಯಾಗಾಂಧಿ ಅವರ ನಿವಾಸ ʼ10 ಜನಪಥ್ʼನಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಭೇಟಿಯಾಗಿದ್ದಾರೆ.

ಈ ಕುರಿತು ಕಾಂಗ್ರೆಸ್ ಎಕ್ಸ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಇಂದು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ಸಂಭಲ್ ಸಂತ್ರಸ್ತರನ್ನು ಭೇಟಿಯಾಗಿದ್ದಾರೆ. ಸಂಭಲ್ ಘಟನೆಯು ಬಿಜೆಪಿಯ ದ್ವೇಷ ರಾಜಕೀಯದ ದುಷ್ಪರಿಣಾಮವಾಗಿದೆ. ಇದು ಶಾಂತಿಯುತ ಸಮಾಜಕ್ಕೆ ಮಾರಕವಾಗಿದೆ, ನಾವು ಈ ಹಿಂಸಾತ್ಮಕ ಮತ್ತು ದ್ವೇಷದ ಮನಸ್ಥಿತಿಯನ್ನು ಪ್ರೀತಿ ಮತ್ತು ಸಹೋದರತೆಯಿಂದ ಸೋಲಿಸಬೇಕು ಮತ್ತು ನಾವು ಎಲ್ಲಾ ಸಂತ್ರಸ್ತರ ಜೊತೆ ನಿಲ್ಲುತ್ತೇವೆ ಮತ್ತು ಅವರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಡಿಸೆಂಬರ್ 4ರಂದು ಹಿಂಸಾಚಾರ ಪೀಡಿತ ಸಂಭಲ್ ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ತೆರಳುವಾಗ ಗಾಝಿಪುರ ಗಡಿಯಲ್ಲಿ ಪೊಲೀಸರು ಅವರನ್ನು ತಡೆದಿದ್ದರು.

ವಿರೋಧ ಪಕ್ಷದ ನಾಯಕನಾಗಿ ಸಂಭಲ್‌ ಗೆ ಹೋಗುವುದು ನನ್ನ ಹಕ್ಕು, ಆದರೆ ಪೊಲೀಸರು ನನ್ನನ್ನು ತಡೆದಿದ್ದಾರೆ. ನಾನು ಒಬ್ಬಂಟಿಯಾಗಿ ಹೋಗಲು ಸಿದ್ದನಾಗಿದ್ದೆ, ಪೊಲೀಸರು ಕರೆದುಕೊಂಡು ಹೋಗುತ್ತಿದ್ದರೂ ಆಗಬಹುದು ಎಂದಿದ್ದೆ,  ಆದರೆ ಅವರು ಅದಕ್ಕೂ ಒಪ್ಪಲಿಲ್ಲ, ಇದು ವಿರೋಧ ಪಕ್ಷದ ನಾಯಕನ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News