ತಮಿಳುನಾಡಿನಲ್ಲಿ ಸಿಎಎ ಜಾರಿಗೆ ಡಿಎಂಕೆ ಸರಕಾರವೆಂದೂ ಅವಕಾಶ ನೀಡುವುದಿಲ್ಲ : ಸಿಎಂ ಎಂ.ಕೆ. ಸ್ಟಾಲಿನ್
ಚೆನ್ನೈ : ದೇಶದಲ್ಲಿಯ ಮುಸ್ಲಿಮ್ ಮತ್ತು ಶ್ರೀಲಂಕಾ ತಮಿಳು ನಿರಾಶ್ರಿತರಂತಹ ಕೆಲವು ಸಮುದಾಯಗಳ ವಿರುದ್ಧ ತಾರತಮ್ಯವನ್ನುಂಟು ಮಾಡುವ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ತಮಿಳುನಾಡಿನಲ್ಲಿ ಜಾರಿಗೊಳಿಸಲು ಡಿಎಂಕೆ ಸರಕಾರವು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಬುಧವಾರ ಖಂಡತುಂಡವಾಗಿ ಹೇಳಿದ್ದಾರೆ.
ರಾಜ್ಯಕ್ಕೆ ವಿದೇಶಿ ಹೂಡಿಕೆಗಳನ್ನು ಆಕರ್ಷಿಸಲು ವಿದೇಶ ಪ್ರವಾಸದಲ್ಲಿರುವ ಸ್ಟಾಲಿನ್, ದೇಶಾದ್ಯಂತ ಏಳು ದಿನಗಳಲ್ಲಿ ಸಿಎಎ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಶಂತನು ಠಾಕೂರ್ ಅವರು ಮಂಗಳವಾರ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ, ಸಂಸತ್ತಿನಲ್ಲಿ ತಿದ್ದುಪಡಿ ಕಾಯ್ದೆಯ ಪರವಾಗಿ ಮತ ಚಲಾಯಿಸಿದ್ದಕ್ಕಾಗಿ ರಾಜ್ಯದ ಮುಖ್ಯ ಪ್ರತಿಪಕ್ಷ ಎಐಎಡಿಎಂಕೆಯನ್ನು ದೂಷಿಸಿದ್ದಾರೆ.
ಸಾಮಾಜಿಕ ಮಾಧ್ಯಮ x ನಲ್ಲಿ ತನ್ನ ನಿಲುವನ್ನು ವ್ಯಕ್ತಪಡಿಸಿರುವ ಸ್ಟಾಲಿನ್, ಪೌರತ್ವ ತಿದ್ದುಪಡಿ ಮಸೂದೆಯನ್ನು ಎಐಎಡಿಎಂಕೆ ಬೆಂಬಲಿಸಿರದಿದ್ದರೆ ಪ್ರಾಯಶಃ ಅದು ಕಾನೂನಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಶಾಸನವು ಶ್ರೀಲಂಕಾ ನಿರಾಶ್ರಿತರು ಮತ್ತು ಮುಸ್ಲಿಮರ ವಿರುದ್ಧ ತಾರತಮ್ಯವನ್ನುಂಟು ಮಾಡುತ್ತದೆ ಎಂದು ಅವರು ಬೆಟ್ಟು ಮಾಡಿದ್ದಾರೆ.
ರಾಜ್ಯದಲ್ಲಿ ಹಿಂದೆ ಡಿಎಂಕೆ ಪ್ರತಿಪಕ್ಷವಾಗಿದ್ದಾಗ ಸಿಎಎ ವಿರುದ್ಧ ಪ್ರತಿಭಟನೆಗಳನ್ನು ನಡೆಸಿತ್ತು ಮತ್ತು ಅದನ್ನು ಹಿಂದೆಗೆದುಕೊಳ್ಳಬೇಕೆಂದು ಆಗ್ರಹಿಸಿ ಸಹಿ ಅಭಿಯಾನವನ್ನು ಆರಂಭಿಸಿತ್ತು. 2021ರಲ್ಲಿ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಸರಕಾರವು ಸಿಎಎ ಅನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಿತ್ತು ಎಂದು ಸ್ಟಾಲಿನ್ ನೆನಪಿಸಿದ್ದಾರೆ.