Fact Check | ಬೆಳ್ಳುಳ್ಳಿ, ಜೀರಿಗೆ ಕುದಿಸಿದ ನೀರು ಕೊಬ್ಬನ್ನು ಕರಗಿಸುತ್ತದೆಯೇ?; ಸತ್ಯಇಲ್ಲಿದೆ

PC : newsmeter.in
ಹೊಸದಿಲ್ಲಿ: ಶರೀರದಲ್ಲಿನ ಕೊಬ್ಬನ್ನು ಕರಗಿಸಲು ‘ಪ್ರಾಚೀನ ವಿಧಾನ’ವೊಂದರ ಕುರಿತು ಇನ್‌ಸ್ಟಾಗ್ರಾಮ್ ವೀಡಿಯೊ ವೈರಲ್ ಆಗಿದೆ. ಕೊಬ್ಬನ್ನು ಕರಗಿಸಲು ಬೆಳ್ಳುಳ್ಳಿಯ ಎರಡು ಎಸಳುಗಳು, ಒಂದು ಚಮಚ ಜೀರಿಗೆ ಮತ್ತು ಲಿಂಬೆ ರಸವನ್ನು ಎರಡು ಕಪ್ ನೀರಿನಲ್ಲಿ ಬೆರೆಸಿ ಕುದಿಸಿದ ಬಳಿಕ ಈ ಮಿಶ್ರಣವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವಂತೆ ಈ ವೀಡಿಯೊದಲ್ಲಿ ಸಲಹೆ ನೀಡಲಾಗಿದೆ.
ಸತ್ಯ ಪರಿಶೀಲನೆ:
newsmeter.in ವೆಬ್‌ಸೈಟ್‌ನ ಫ್ಯಾಕ್ಟ್ ಚೆಕ್ ಡೆಸ್ಕ್ ಈ ಹೇಳಿಕೆ ತಪ್ಪುದಾರಿಗೆಳೆಯುತ್ತಿದೆ ಎನ್ನುವುದನ್ನು ಬಹಿರಂಗಗೊಳಿಸಿದೆ.
ಕೊಬ್ಬನ್ನು ಕರಗಿಸಲು ಈ ವಿಧಾನದಿಂದ ಯಾವುದೇ ಉಪಯೋಗವಿಲ್ಲ ಎಂದು ಹೇಳಿರುವ ಹೃದಯತಜ್ಞ ಡಾ.ರಾಘವೇಂದ್ರ ಚೆರುಕ್ಕು ಅವರು, ಕೊಬ್ಬನ್ನು ಕಡಿಮೆ ಮಾಡಲು ಏಕೈಕ ತಂತ್ರ ಯಾವುದೂ ಇಲ್ಲ. ಈ ಕಾರ್ಯತಂತ್ರಕ್ಕೆ ಆರೋಗ್ಯಕರ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮವು ಪೂರಕವಾಗಿರಬೇಕು. ಬೆಳ್ಳುಳ್ಳಿಯ ಆ್ಯಂಟಿಲಿಪಿಡೆಮಿಕ್ (ರಕ್ತದಲ್ಲಿ ಕೊಬ್ಬು ಶೇಖರಣೆಯನ್ನು ತಡೆಗಟ್ಟುವ)ಗುಣವು ಎಲ್‌ಡಿಎಲ್(ಕೆಟ್ಟ ಕೊಲೆಸ್ಟ್ರಾಲ್)ನ್ನು ಕಡಿಮೆ ಮಾಡಲು ಮತ್ತು ಎಚ್‌ಡಿಎಲ್(ಒಳ್ಳೆಯ ಕೊಲೆಸ್ಟ್ರಾಲ್)ನ್ನು ಹೆಚ್ಚಿಸಲು ನೆರವಾಗುತ್ತದೆ,ಆದರೆ ಟ್ರೈಗ್ಲಿಸರೈಡ್‌ಗಳ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ವಿವರಿಸಿದರು.
ಬೆಳ್ಳುಳ್ಳಿಯು ಉತ್ಕರ್ಷಣ ನಿರೋಧಕ ಮತ್ತು ಆ್ಯಂಟಿಬಯಾಟಿಕ್ ಅಥವಾ ಪ್ರತಿಜೀವಕ ಗುಣಗಳನ್ನು ಹೊಂದಿದ್ದು,ಇದು ಇತರ ಆರೋಗ್ಯ ಲಾಭಗಳನ್ನು ಪಡೆಯಲು ನೆರವಾಗುತ್ತದೆ.
ಇಲಿಗಳು ಮತ್ತು ಮಾನವರ ಮೇಲೆ ನಡೆಸಿದ ಕೆಲವು ಅಧ್ಯಯನಗಳು ಬೆಳ್ಳುಳ್ಳಿಯ ಆ್ಯಂಟಿಲಿಪಿಡೆಮಿಕ್ ಗುಣಗಳು ಕೊಬ್ಬನ್ನು ಕರಗಿಸಲು ನೆರವಾಗುತ್ತವೆ ಎನ್ನುವುದನ್ನು ತೋರಿಸಿವೆ. ಆದಾಗ್ಯೂ ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣವನ್ನು ಸೇವಿಸುವುದು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೊಂದಿರುವವರಿಗೆ ಹಾನಿಕಾರಕವಾಗಬಹುದು. ಹೀಗಾಗಿ ಆಹಾರ ಸೇವನೆಯ ಬಳಿಕ ಈ ಮಿಶ್ರಣವನ್ನು ತೆಗೆದುಕೊಳ್ಳಬಹುದು ಎಂದು ಡಾ.ಚೆರುಕ್ಕು ಹೇಳಿದರು.
ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಹೆಚ್ಚು ಪ್ರೋಟಿನ್ ಮತ್ತು ಹೆಚ್ಚು ನಾರು ಹಾಗೂ ಕಡಿಮೆ ಎಣ್ಣೆ ಮತ್ತು ಕಡಿಮೆ ಕಾರ್ಬೊಹೈಡ್ರೇಟ್‌ಗಳನ್ನು ಹೊಂದಿರುವ ಸಮತೋಲಿತ ಆಹಾರ ಸೇವನೆಯ ಅಗತ್ಯವಿದೆ. ಮೈದಾದಂತಹ ಕಾರ್ಬೊಹೈಡ್ರೇಟ್‌ಗಳನ್ನು ಒಳಗೊಂಡಿರುವ ಆಹಾರವು ಟ್ರೈಗ್ಲಿಸರೈಡ್‌ಗಳಾಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಈ ಮಿಶ್ರಣವನ್ನು ಸೇವಿಸುವುದರಿಂದ ಇದನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಅವರು,ಹೆಚ್ಚಿನ ದಕ್ಷಿಣ ಭಾರತೀಯರು ದೈನಂದಿನ ಅಗತ್ಯವಾದ ಗರಿಷ್ಠ 2-3 ಚಮಚಗಳಷ್ಟು ಎಣ್ಣೆಯ ಬದಲು 10-15 ಚಮಚ ಎಣ್ಣೆಯನ್ನು ಸೇವಿಸುತ್ತಾರೆ. ಟ್ರೈಗ್ಲಿಸರೈಡ್‌ಗಳನ್ನು ಮತ್ತು ಕೆಟ್ಟ ಕೊಲೆಸ್ಟ್ರಾಲ್‌ನ್ನು ತಗ್ಗಿಸಲು ವಾರಕ್ಕೆ 150 ನಿಮಿಷಗಳ ವ್ಯಾಯಾಮ ಮತ್ತು ಸಮತೋಲಿತ ಆಹಾರ ಸೇವನೆ ಅಗತ್ಯವಾಗಿದೆ ಎಂದರು.
ಈ ಲೇಖನವನ್ನು ಮೊದಲು newsmeter.in ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.