ಸಮ್ಮತಿಯಿಲ್ಲದೆ ಸ್ಥಳ, ಸಂಸ್ಥೆಗಳ ಹೆಸರನ್ನು ಬದಲಿಸಬಾರದು: ಮಣಿಪುರ ಸರ್ಕಾರ ಎಚ್ಚರಿಕೆ

Update: 2023-10-08 10:28 GMT

Photo: PTI

ಇಂಫಾಲ: ಸಮುದಾಯಗಳ ನಡುವೆ ಸಂಘರ್ಷವಾಗುವ ಸಾಧ್ಯತೆ ಇರುವುದರಿಂದ ಸಮ್ಮತಿಯಿಲ್ಲದೆ ಏಕಪಕ್ಷೀಯವಾಗಿ ಸ್ಥಳಗಳು ಹಾಗೂ ಸಂಸ್ಥೆಗಳ ಹೆಸರನ್ನು ಬದಲಿಸಬಾರದು ಎಂದು ಜನಸಾಮಾನ್ಯರಿಗೆ ಹಾಗೂ ನಾಗರಿಕ ಸಮಾಜ ಸಂಸ್ಥೆಗಳಿಗೆ ಮಣಿಪುರ ಸರ್ಕಾರ ಎಚ್ಚರಿಕೆ ನೀಡಿದೆ ಎಂದು scroll.in ವರದಿ ಮಾಡಿದೆ.

ಮೈತೈಗಳು ಹಾಗೂ ಕುಕಿಗಳ ನಡುವಿನ ಜನಾಂಗೀಯ ಸಂಘರ್ಷದಿಂದ ರಾಜ್ಯವು ನಲುಗಿರುವ ಸಂದರ್ಭದಲ್ಲಿ ಗುರುವಾರ ಮುಖ್ಯ ಕಾರ್ಯದರ್ಶಿ ವಿನೀತ್ ಜೋಶಿ ಈ ಆದೇಶ ಹೊರಡಿಸಿದ್ದಾರೆ. ಮೇ 3ರಂದು ಮಣಿಪುರದಲ್ಲಿ ಆರಂಭವಾದ ಜನಾಂಗೀಯ ಸಂಘರ್ಷದಲ್ಲಿ ಇಲ್ಲಿಯವರೆಗೆ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಕನಿಷ್ಠ 60,000 ಮಂದಿ ನಿರಾಶ‍್ರಿತರಾಗಿದ್ದಾರೆ.

“ರಾಜ್ಯ ಸರ್ಕಾರದ ಅನುಮೋದನೆ ಇಲ್ಲದೆ ಯಾರೂ ಕೂಡಾ ಒತ್ತಾಯಪೂರ್ವಕವಾಗಿ ಜಿಲ್ಲೆಗಳು, ತಾಲ್ಲೂಕುಗಳು, ಸ್ಥಳಗಳು, ಸಂಸ್ಥೆಗಳು ಹಾಗೂ ವಿಳಾಸಗಳ ಹೆಸರನ್ನು ಬದಲಿಸುವ ಪ್ರಯತ್ನ ಮಾಡಕೂಡದು” ಎಂದು ಆ ಆದೇಶದಲ್ಲಿ ಹೇಳಲಾಗಿದೆ.

ರಾಜ್ಯದಲ್ಲಿ ಜನಾಂಗೀಯ ಸಂಘರ್ಷ ನಡೆಯುತ್ತಿರುವುದರಿಂದ ಇಂತಹ ಕೃತ್ಯಗಳು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲಿದ್ದು, ಇಂತಹ ಕೃತ್ಯಗಳನ್ನು ತುಂಬಾ ಗಂಭೀರವಾಗಿ ಮತ್ತು ಬಹಳ ಸೂಕ್ಷ್ಮವಾಗಿ ಪರಿಗಣಿಸಲಾಗುವುದು ಎಂದೂ ಮಣಿಪುರ ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.

“ಯಾರಾದರೂ ಈ ಆದೇಶವನ್ನು ಉಲ್ಲಂಘಿಸುವುದು ಕಂಡು ಬಂದರೆ, ಸದ್ಯ ಚಾಲ್ತಿಯಲ್ಲಿರುವ ಸೂಕ್ತ ನೆಲದ ಕಾನೂನಿನನ್ವಯ ಅಂಥವರನ್ನು ಶಿಕ್ಷಿಸಲಾಗುವುದು. ಎಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಚೇರಿಗಳು, ಆಡಳಿತ ಮಂಡಳಿಗಳು, ಸಂಸ್ಥೆಗಳು, ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು ತಮಗೆ ಸಂಬಂಧಿಸಿದ ಕಚೇರಿಗಳು/ಉದ್ಯಮಗಳ ಹೆಸರು ಎಲ್ಲ ಸೂಚನಾ ಫಲಕಗಳು, ಅಧಿಕೃತ ಸಂವಹನಗಳು, ಅಂತರ್ಜಾಲಗಳು, ಒದಗಿಸಲಾಗಿರುವ ಸೇವೆಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಇತ್ಯಾದಿಗಳಲ್ಲಿ ಸಮರ್ಪಕವಾಗಿದೆಯೆ ಎಂದು ಪರಿಶೀಲಿಸಿಕೊಳ್ಳಬೇಕು ಹಾಗೂ ಆದೇಶಕ್ಕೆ ಬದ್ಧವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು” ಎಂದು ಮುಖ್ಯ ಕಾರ್ಯದರ್ಶಿ ವಿನೀತ್ ಜೋಶಿ ಆದೇಶಿಸಿದ್ದಾರೆ.

ಕುಕಿ ಸಮುದಾಯದ ಪ್ರಾಬಲ್ಯವಿರುವ ಮಣಿಪುರದ ಚೂರಾಚಂದಪುರ್ ಜಿಲ್ಲೆಯ ಹೆಸರನ್ನು ‘ಲಮ್ಕಾ’ ಎಂದು ಮರುನಾಮಕರಣ ಮಾಡುವ ಪ್ರಯತ್ನದ ಭಾಗವಾಗಿ ಮನೆಗಳು, ಮಳಿಗೆಗಳು, ಸರ್ಕಾರಿ ಕಚೇರಿಗಳ ಎದುರಿನ ಫಲಕಗಳಿಗೆ ಬಣ್ಣ ಬಳಿಯಲಾಗಿತ್ತು. ಕುಕಿ ಭಾಷೆಯಲ್ಲಿ ‘ಲಮ್ಕಾ’ ಎಂದರೆ ಅಡ್ಡ ರಸ್ತೆಗಳು ಎಂದಾಗಿದೆ. ಈ ಹಿನ್ನೆಲೆಯಲ್ಲಿ ಮಣಿಪುರ ಸರ್ಕಾರವು ಬಲವಂತವಾಗಿ ಮರುನಾಮಕರಣ ಮಾಡುವ ಪ್ರವೃತ್ತಿಯ ವಿರುದ್ಧ ಮೇಲಿನಂತೆ ಆದೇಶ ಹೊರಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News