ಜಮ್ಮು-ಕಾಶ್ಮೀರ ಚುನಾವಣೆ | ಎಕ್ಸಿಟ್ ಪೋಲ್ ಬಿಡುಗಡೆಗೆ ನಿರ್ಬಂಧ ವಿಧಿಸಿದ ಚುನಾವಣಾ ಆಯೋಗ

Update: 2024-09-11 09:55 GMT

Photo : PTI

ಶ್ರೀನಗರ : 2024ರ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮಾಧ್ಯಮಗಳು ಅಥವಾ ಇನ್ಯಾವುದೇ ರೀತಿಯಲ್ಲಿ ಎಕ್ಸಿಟ್ ಪೋಲ್ ಗಳನ್ನು ಬಿಡುಗಡೆ ಮಾಡುವುದನ್ನು ಜನತಾ ಪ್ರಾತಿನಿಧ್ಯ ಕಾಯಿದೆ-1951ರ ಅಡಿಯಲ್ಲಿ ಚುನಾವಣಾ ಆಯೋಗವು ನಿಷೇಧಿಸಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಅಧಿಸೂಚನೆಯ ಪ್ರಕಾರ, ರಾಜ್ಯದಲ್ಲಿ ಮತದಾನದ ಆರಂಭದ ದಿನದಿಂದ ಮತದಾನ ಸಂಪೂರ್ಣವಾಗಿ ಮುಗಿದ ಅರ್ಧ ಘಂಟೆಯವರೆಗೆ ನಿರ್ಬಂಧ ಮುಂದುವರಿಯುತ್ತದೆ ಎಂದು ವಕ್ತಾರರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಮೂರು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಮತದಾನ ಸೆ.18 ರಂದು ನಡೆಯಲಿದೆ ಮತ್ತು 2ನೇ ಹಂತವನ್ನು ಸೆ. 25ರಂದು ಮತ್ತು 3ನೇ ಹಂತದ ಮತದಾನ ಅ.1 ರಂದು ನಡೆಯಲಿದೆ.

ಜನತಾ ಪ್ರಾತಿನಿಧ್ಯ ಕಾಯಿದೆ- 1951ರ ಸೆಕ್ಷನ್ 126Aರಡಿಯಲ್ಲಿ ಚುನಾವಣಾ ಆಯೋಗವು ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಅಧಿಸೂಚನೆಯಲ್ಲಿ ಯಾವುದೇ ವ್ಯಕ್ತಿ ಯಾವುದೇ ಎಕ್ಸಿಟ್ ಪೋಲ್ ಸಮೀಕ್ಷೆಯನ್ನು ನಡೆಸಬಾರದು. ಇದಲ್ಲದೆ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಸಮೀಕ್ಷೆಯನ್ನು ಪ್ರಕಟಿಸಬಾರದು ಅಥವಾ ಪ್ರಚಾರ ಮಾಡಬಾರದು ಎಂದು ಹೇಳಿದೆ. ಒಂದು ವೇಳೆ ಈ ಸೆಕ್ಷನ್ ಗಳ ನಿಬಂಧನೆಗಳನ್ನು ಉಲ್ಲಂಘಿಸಿದರೆ ಅಂತಹ ವ್ಯಕ್ತಿಗೆ ಒಂದು ವರ್ಷ ಅಥವಾ ಅದಕ್ಕಿಂತ ಅಧಿಕ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಚುನಾವಣಾ ಆಯೋಗವು ಸೆ.18, 2024ರಂದು 7 ಗಂಟೆಯಿಂದ ಅ.5, 2024ರಂದು ಸಂಜೆ 6.30ರವರೆಗೆ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮ ಸೇರಿದಂತೆ ಯಾವುದೇ ವಿಧಾನದಲ್ಲಿ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ನಡೆಸುವುದು, ಪ್ರಕಟಿಸುವುದು ಅಥವಾ ಪ್ರಚಾರ ಮಾಡುವುದು ನಿಷೇಧಿಸಿದೆ ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News