ʼಪಾಕ್ ಧ್ವಜ ಹಾರಿಸಿದ ಮಸೀದಿಯನ್ನು ಒಡೆಯಲಾಗಿದೆʼ ಎಂದು ವಿಡಿಯೋ ಹಂಚಿಕೊಂಡ ಮಾಜಿ ನೌಕಾಧಿಕಾರಿ: ವೈರಲ್‌ ವಿಡಿಯೋದ ವಾಸ್ತವಾಂಶವೇನು?

Update: 2023-07-07 17:51 GMT

 Photo: Twitter \ @zoo_bear

ಹೊಸದಿಲ್ಲಿ: ಉತ್ತರ ಪ್ರದೇಶದ ಸೈದಾಬಾದ್‌ನಲ್ಲಿ ಪಾಕಿಸ್ತಾನದ ಧ್ವಜವನ್ನು ಗುಮ್ಮಟದ ಮೇಲೆ ಹಾರಿಸಿದ್ದಕ್ಕಾಗಿ ಮಸೀದಿಯನ್ನು ಕೆಡವಲಾಯಿತು ಎಂದು ಪ್ರತಿಪಾದಿಸಿ, ಭಾರತೀಯ ನೌಕಾದಳದ ಮಾಜಿ ಅಧಿಕಾರಿಯೊಬ್ಬರು, ʼಫ್ರೆಂಚ್‌ (ಫ್ರಾನ್ಸ್‌ ಸರ್ಕಾರ) ಉತ್ತರಪ್ರದೇಶದಿಂದ ಕಲಿಯಬೇಕುʼ ಎಂದು ಟ್ವೀಟ್‌ ಮಾಡಿದ್ದಾರೆ.

ಹಲವು ಬಲಪಂಥೀಯರು ಈ ಟ್ವೀಟ್‌ ಅನ್ನು ಮರು ಟ್ವೀಟ್‌ ಮಾಡಿದ್ದು, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್‌ ಅವರನ್ನು ಶ್ಲಾಘಿಸಿ ಟ್ವೀಟ್‌ ಮಾಡಿದ್ದಾರೆ.

“ಭಾರತದ ವಿಶ್ವದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಿಂದ ಫ್ರೆಂಚ್ ಪಾಠವನ್ನು ತೆಗೆದುಕೊಳ್ಳಬಹುದು. ಪ್ರಯಾಗದಲ್ಲಿ, ಜಿಹಾದಿಗಳು ಮಸೀದಿಯ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಿ, ಭಾರತ ಮತ್ತು ಭಾರತೀಯರ ಮೇಲೆ ವ್ಯಂಗ್ಯ ಮಾಡಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಧ್ವಜವನ್ನು ಉರುಳಿಸುವ ಬದಲು ಇಡೀ ಮಸೀದಿಯನ್ನು ಕೆಡವಿದರು. ಇದರಿಂದ ದಿಗ್ಭ್ರಮೆಗೊಂಡ ಮೌಲ್ವಿಗಳು ಯುಪಿಯಾದ್ಯಂತ ಮತ್ತೊಮ್ಮೆ ಆ ಪ್ರಮಾದವನ್ನು ಮಾಡದಿರಲು ನಿರ್ಧರಿಸಿದ್ದಾರೆ. ಯೋಗಿ ಜೀ ಮಹಾರಾಜರು ಇನ್ನೂ ಹೋಗಬೇಕಿದೆ. ನಿಮ್ಮ ಧೈರ್ಯ ಮತ್ತು ಧೈರ್ಯಕ್ಕೆ ಹ್ಯಾಟ್ಸ್ ಆಫ್. ದೇಶದ್ರೋಹಿಗಳನ್ನು/ಖಲಿಸ್ತಾನಿಗಳನ್ನು/ಜಿಹಾದಿಗಳನ್ನು ಪ್ರಾಯೋಜಿಸುವ ಶತ್ರುವನ್ನು ಭಾರತದಲ್ಲಿ ಸಹಿಸಲಾಗುವುದಿಲ್ಲ.ಜೈ ಹಿಂದ್” ಎಂದು ಹರಿಂದರ್‌ ಎಸ್‌ ಸಿಕ್ಕ ಎಂಬ ಮಾಜಿ ನೌಕಾಧಿಕಾರಿ ಟ್ವೀಟ್‌ ಮಾಡಿದ್ದಾರೆ.

ವಾಸ್ತವಾಂಶವೇನು?

ವಾಸ್ತವದಲ್ಲಿ ಈ ಮಸೀದಿಯನ್ನು ಪಾಕಿಸ್ತಾನ ದ್ವಜ ಹಾರಿಸಿದಕ್ಕಾಗಿ ಧ್ವಂಸಗೊಳಿಸಲಾಗಿಲ್ಲ. ಬದಲಾಗಿ, ರಸ್ತೆ ಅಗಲೀಕರಣಕ್ಕಾಗಿ ಮಸೀದಿಯ ಕಟ್ಟಡವನ್ನು ಕೆಡವಲಾಗಿದೆ.

ಹಂಡಿಯಾ ತಹಸಿಲ್ ವ್ಯಾಪ್ತಿಯ ಸೈದಾಬಾದ್ ಮಾರುಕಟ್ಟೆಯಲ್ಲಿರುವ ಶಾಹಿ ಮಸೀದಿಯನ್ನು ಶೇರ್ ಶಾ ಸೂರಿ ಕಾಲದಲ್ಲಿ ನಿರ್ಮಿಸಲಾಗಿತ್ತು. ಈ ಮಸೀದಿಯ ಕಟ್ಟಡವನ್ನು ಭದ್ರತಾ ಪಡೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ನೆಲಸಮಗೊಳಿಸಲಾಗಿತ್ತು. ‌

ಇದನ್ನು ಫ್ಯಾಕ್ಟ್‌ ಚೆಕರ್‌, Altnews.com ಸಹ ಸಂಸ್ಥಾಪಕ ಮಹಮ್ಮದ್‌ ಝುಬೈರ್‌ ಅಲ್ಲಗೆಳೆದಿದ್ದು, ಇದನ್ನು PWD ಕಾಮಗಾರಿಗಾಗಿ ನೆಲಸಮಗೊಳಿಸಲಾಗಿದೆ ಎಂದು ತಿಳಿಸಿ, ನಿಜ ಸುದ್ದಿಯ ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News