FACT CHECK - ನಮಾಝ್ ಗಾಗಿ ಹಾಮಿದ್ ಅನ್ಸಾರಿ ರಾಜ್ಯಸಭೆ ಕಲಾಪ ಮುಂದೂಡುತ್ತಿರಲಿಲ್ಲ
ಹೊಸದಿಲ್ಲಿ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ರಾಜ್ಯಸಭೆಯಲ್ಲಿ ಮಾತನಾಡುವ ವೀಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮಾಜಿ ಉಪರಾಷ್ಟ್ರಪತಿ ಮತ್ತು ಆಗಿನ ರಾಜ್ಯಸಭಾ ಅಧ್ಯಕ್ಷ ಹಾಮಿದ್ ಅನ್ಸಾರಿ ಅವರು ನಮಾಝ್ ಗಾಗಿ ಸಂಸತ್ತಿನ ಕಲಾಪವನ್ನು ಮುಂದೂಡುತ್ತಿದ್ದರು ಎಂದು ಮಾಯಾವತಿ ಆರೋಪಿಸಿದ್ದಾರೆ ಎಂದು ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ನೀಡಲಾಗುತ್ತಿದೆ. ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ವಿರುದ್ಧ ಕೆಲವು ಆಧಾರರಹಿತ ಆರೋಪ ಮಾಡಲಾಗುತ್ತಿದೆ.
ರಾಜ್ಯಸಭಾ ಅಧ್ಯಕ್ಷರಾಗಿದ್ದಾಗ ಹಾಮಿದ್ ಅನ್ಸಾರಿ ನಮಾಝ್ ಗಾಗಿ ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಸದನವನ್ನು ಮುಂದೂಡುತ್ತಿದ್ದರು. ಇದು ಸಂಸತ್ತಿನ ಕಲಾಪಗಳಲ್ಲಿ ಅಡ್ಡಿ ಮತ್ತು ವಿಳಂಬವನ್ನು ಉಂಟುಮಾಡುತ್ತಿತ್ತು ಎಂದು ವೈರಲ್ ವೀಡಿಯೊ ಸೂಚಿಸುತ್ತದೆ. ಈ ಅಡೆತಡೆಗಳ ಬಗ್ಗೆ ಮಾಯಾವತಿ ಅವರು ಅನ್ಸಾರಿ ಅವರನ್ನು ಪ್ರಶ್ನಿಸಿದ್ದಾರೆ ಎಂದು ವೈರಲ್ ವೀಡಿಯೊದಲ್ಲಿನ ಸಮರ್ಥನೆಗಳು ಸೂಚಿಸುತ್ತವೆ. ಫ್ಯಾಕ್ಟ್ ಚೆಕ್ ಮಾಡಿದಾಗ ವೀಡಿಯೊದಲ್ಲಿ ವಾಸ್ತವ ಅಂಶವನ್ನು ಮರೆಮಾಚಿರುವುದು ಕಂಡು ಬರುತ್ತಿದೆ.
ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವೀಡಿಯೊ ಬಹಳ ಹಿಂದಿನದು. ಡಿಸೆಂಬರ್ 12, 2012 ರಂದು ರಾಜ್ಯಸಭೆಯ ಅಧಿವೇಶನದ ಸಂದರ್ಭ ಮಾಯಾವತಿ ಅವರು ಅನ್ಸಾರಿ ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ಸದನದಲ್ಲಿ ಆಗಾಗ್ಗೆ ಅಡ್ಡಿಪಡಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆದರೆ ಎಲ್ಲೂ ವೀಡಿಯೊದಲ್ಲಿ ಈಗ ತಪ್ಪು ಮಾಹಿತಿಯೊಂದಿಗೆ ವೈರಲ್ ಆಗುತ್ತಿರುವಂತೆ ನಮಾಝ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ವೀಡಿಯೊದ ಸನ್ನಿವೇಶವು ಸರಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST)ಗಳಿಗೆ ಬಡ್ತಿಗಳಲ್ಲಿ ಮೀಸಲಾತಿಯನ್ನು ಒದಗಿಸುವ ಮಸೂದೆಯ ಸುತ್ತಲಿನ ಚರ್ಚೆಗೆ ಸಂಬಂಧಿಸಿದೆ. ಈ ಮಸೂದೆಯನ್ನು ಸಮಾಜವಾದಿ ಪಕ್ಷವು ಬಲವಾಗಿ ವಿರೋಧಿಸಿತು. ಇದು ರಾಜ್ಯಸಭೆಯಲ್ಲಿ ಪದೇ ಪದೇ ಗೊಂದಲಕ್ಕೆ ಕಾರಣವಾಯಿತು. ಸಮಾಜವಾದಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಎರಡೂ ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಮಾಯಾವತಿ ಟೀಕಿಸಿದರು. ಇದರ ಹಿಂದೆ ದುರುದ್ದೇಶವಿದೆ ಎಂದು ಆರೋಪಿಸಿದ್ದರು.
ಡಿಸೆಂಬರ್ 2012 ರಿಂದ ರಾಜ್ಯಸಭೆ ಕಲಾಪಗಳಿಗೆ ಅಡ್ಡಿ ಪಡಿಸಿದ ಸುತ್ತಲಿನ ಘಟನೆಗಳನ್ನು ದಾಖಲಿಸಿದ ಸುದ್ದಿ ವರದಿಗಳನ್ನೂ ಫ್ಯಾಕ್ಟ್ ಚೆಕ್ ಮಾಡುವಾಗ ಪರಿಶೀಲಿಸಲಾಯಿತು. ಸಮಾಜವಾದಿ ಪಕ್ಷವು ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಯಾಯಿತು. ಏರುದನಿಯ ಚರ್ಚೆಗಳು ನಡೆಯಿತು, ಇದು ಕಲಾಪಕ್ಕೆ ಮತ್ತಷ್ಟು ವಿಳಂಬ ಮಾಡಿತು ಎಂಬ ಅಂಶ ಕಂಡು ಬರುತ್ತದೆ.
ಡಿಸೆಂಬರ್ 11, 2012 ಡಿಸೆಂಬರ್ 11, 2012 ರ ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಸಮಾಜವಾದಿ ಪಕ್ಷದ ವಿರೋಧದಿಂದಾಗಿ ಸರಕಾರಿ ಉದ್ಯೋಗಗಳಲ್ಲಿ ಎಸ್‌ಸಿ/ಎಸ್‌ಟಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಒದಗಿಸುವ ಮಸೂದೆಯನ್ನು ಮಂಡಿಸಲು ಸಾಧ್ಯವಾಗಲಿಲ್ಲ. ಯುಪಿಎ ಸರಕಾರ ಈ ಮಸೂದೆಯನ್ನು ಬೆಂಬಲಿಸುತ್ತಿದ್ದರೂ, ಡಿಎಂಕೆ ಪಕ್ಷವು ಒಬಿಸಿಗಳನ್ನು ಮಸೂದೆಯಲ್ಲಿ ಸೇರಿಸಲು ಬಯಸಿತ್ತು. ಈ ಮಸೂದೆಯ ಬಗ್ಗೆ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ. ಆದರೆ ಸಮಾಜವಾದಿ ಪಕ್ಷವು ಈ ಮಸೂದೆಗೆ ಸಂಬಂಧಿಸಿದಂತೆ ಬಿಎಸ್‌ಪಿಯೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿತ್ತು. ಎಸ್‌ಪಿ ನಾಯಕ ರಾಮ್ ಗೋಪಾಲ್ ಯಾದವ್, “ನ್ಯಾಯಾಲಯಗಳು ಈ ಕ್ರಮವನ್ನು ಟೀಕಿಸಿವೆ ಮತ್ತು ಸರಕಾರವು ಈ ಮಸೂದೆಯನ್ನು ಅಂಗೀಕರಿಸುವಲ್ಲಿ ಅಚಲವಾಗಿದ್ದರೆ, ನ್ಯಾಯಾಲಯಗಳು ಅದನ್ನು ಮತ್ತೆ ತಿರಸ್ಕರಿಸುತ್ತವೆ. ನಾವು ಈ ಮಸೂದೆಯನ್ನು ವಿರೋಧಿಸುವುದನ್ನು ಮುಂದುವರಿಸುತ್ತೇವೆ” ಎಂದಿದ್ದರು. ಈ ಮಸೂದೆಯನ್ನು ಮಂಡಿಸಿದರೆ ಸದನದ ಕಲಾಪಕ್ಕೆ ಪ್ರತಿನಿತ್ಯ ಅಡ್ಡಿಪಡಿಸುವುದಾಗಿ ಸಮಾಜವಾದಿ ಪಕ್ಷ ಹೇಳಿತ್ತು. ಈ ವಿಷಯದ ಚರ್ಚೆ ನಡೆಯುತ್ತಿರುವಾಗ ಸಮಾಜವಾದಿ ಪಕ್ಷವು 14 ದಿನಗಳ ಕಾಲ ಸದನದ ಕಲಾಪಕ್ಕೆ ಹಲವು ಬಾರಿ ಅಡ್ಡಿಪಡಿಸಿತ್ತು. ಸದನದ ಕಲಾಪಕ್ಕೆ ಬಿಜೆಪಿ ಅಡ್ಡಿಪಡಿಸುತ್ತಿದೆ ಎಂದು ಮಾಯಾವತಿ ಟೀಕಿಸಿದ್ದರು. ಸಮಾಜವಾದಿ ಪಕ್ಷವು ಬಿಜೆಪಿಯ ಇಚ್ಛೆಯಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದರು. ಮುಂದಿನ ಎರಡು ಮೂರು ದಿನಗಳಲ್ಲಿ ಈ ವಿಷಯದಲ್ಲಿ ಸರಕಾರರದ ದೃಷ್ಟಿಕೋನ ಬದಲಾಗದಿದ್ದರೆ, ಬಿಎಸ್‌ಪಿ ಕಠಿಣ ನಿಲುವು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದರು.
ಡಿಸೆಂಬರ್ 12, 2012, ಡಿಸೆಂಬರ್ 12, 2012 ರಂದು ಇಂಡಿಯಾ ಟಿವಿಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಅದೇ ದಿನ ರಾಜ್ಯಸಭೆಯ ಕಲಾಪದಲ್ಲಿ, ಸಭಾಪತಿ ಹಾಮಿದ್ ಅನ್ಸಾರಿ ಅವರನ್ನು ಸದನದಲ್ಲಿ ಆಗಾಗ್ಗೆ ಅಡ್ಡಿಪಡಿಸುವ ಕುರಿತು ಪ್ರಶ್ನಿಸಿದ್ದರು. “ಪ್ರತಿದಿನ ಮಧ್ಯಾಹ್ನ 12 ಗಂಟೆಯ ನಂತರ ಸದನ ಕಾರ್ಯನಿರ್ವಹಿಸುವುದಿಲ್ಲ. ಇದಕ್ಕೆ ಯಾರು ಜವಾಬ್ದಾರರು? ನೀವು ಸದನದ ಅಧ್ಯಕ್ಷರು, ಮಧ್ಯಾಹ್ನ 12 ಗಂಟೆಯ ನಂತರ ರಾಜ್ಯಸಭೆಯು ಕ್ರಮಬದ್ಧವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ” ಎಂದಿದ್ದರು.
ವರದಿ ಪ್ರಕಾರ, ಈ ಗದ್ದಲದಿಂದಾಗಿ ಉಭಯ ಸದನಗಳಲ್ಲಿ ಸತತ ಮೂರನೇ ದಿನವೂ ಕಲಾಪ ವಿಳಂಬವಾಗಿತ್ತು. ಸರಕಾರಿ ಉದ್ಯೋಗಗಳಲ್ಲಿ ಎಸ್‌ಸಿ/ಎಸ್‌ಟಿ ವರ್ಗದವರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಮಸೂದೆಯನ್ನು ಪರಿಗಣಿಸಲು ವಿಳಂಬವಾಗುತ್ತಿರುವುದಕ್ಕೆ ಮಾಯಾವತಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಎಸ್‌ಪಿ ಈ ಮಸೂದೆಗೆ ಒತ್ತಾಯಿಸುತ್ತಿರುವಾಗ ಸಮಾಜವಾದಿ ಪಕ್ಷವು ಮಸೂದೆಯು ಸಮಾಜವನ್ನು ವಿಭಜಿಸುತ್ತದೆ ಎಂದು ವಾದಿಸಿ ತೀವ್ರವಾಗಿ ವಿರೋಧಿಸಿತ್ತು. ವಿರೋಧ ಹೆಚ್ಚಾಗಿ ಉಂಟಾದ ಗದ್ದಲದ ಗೊಂದಲದಿಂದಾಗಿ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಸಾಧ್ಯವಾಗಿರಲಿಲ್ಲ.
ಡಿಸೆಂಬರ್ 13, 2012, ಡಿಸೆಂಬರ್ 13, 2012 ರಂದು ಇಂಡಿಯಾ ಟುಡೆ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಅವರಿಗೆ ಕರೆಮಾಡಿ ರಾಜ್ಯಸಭೆಯಲ್ಲಿ ಕಲಾಪಗಳ ಮೇಲಿನ ಅಡ್ಡಿಯ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದರು. ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿಗಳಿಗೆ ಅವಮಾನವಾದ ಹೊರತಾಗಿಯೂ ಸರಕಾರವಾಗಲೀ, ಕಾಂಗ್ರೆಸ್ ಪಕ್ಷವಾಗಲೀ ಬಿ ಎಸ್ ಪಿ ನಾಯಕಿಯನ್ನು ಬಹಿರಂಗವಾಗಿ ಎಲ್ಲಿಯೂ ಟೀಕಿಸಿರಲಿಲ್ಲ. ಕಾಂಗ್ರೆಸ್ ವಕ್ತಾರೆ ರೇಣುಕಾ ಚೌಧರಿ ಅವರು ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿಗಳ ಮೇಲಿನ ದಾಳಿಯಿಂದ ನೋವಾಗಿದೆ. ಸರಕಾರಿ ಉದ್ಯೋಗಗಳಲ್ಲಿ ಬಡ್ತಿಯಲ್ಲಿ ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿಯ ನೀಡುವ ಮಸೂದೆಯು ದೊಡ್ಡ ರಾಜ್ಯಗಳಲ್ಲಿ ಪರಿಣಾಮ ಬೀರಲಿದೆ. ಅವರಿಗೆ ಬೇಕಾದ್ದನ್ನು ಹೇಳಲು ಅವಕಾಶ ನೀಡಬೇಕು. ಸಂಬಂಧಪಟ್ಟ ಪಕ್ಷಗಳು ಇದನ್ನು ಗಮನಿಸಬೇಕು ಎಂದು ಹೇಳಿದ್ದರು. ಆ ಬಳಿಕ ಮಾತನಾಡಿದ್ದ ಸಮಾಜವಾದಿ ಪಕ್ಷವು ಸರಕಾರಿ ಉದ್ಯೋಗಗಳಲ್ಲಿ ಬಡ್ತಿಯಲ್ಲಿ ಎಸ್‌ಸಿ/ಎಸ್‌ಟಿಗೆ ಮೀಸಲಾತಿ ನೀಡುವ ಕ್ರಮವು ಅಸಾಂವಿಧಾನಿಕವಾಗಿದೆ. ಇದು 80% ಉದ್ಯೋಗಿಗಳನ್ನು ಉದ್ಯೋಗ ಬಡ್ತಿಯಿಂದ ವಂಚಿತಗೊಳಿಸುತ್ತದೆ ಎಂದು ಹೇಳಿತ್ತು. ಇದರೊಂದಿಗೆ ಸಮಾಜವಾದಿ ಪಕ್ಷದ ಸಂಸದರು ಅಗತ್ಯಬಿದ್ದರೆ ಪ್ರತಿದಿನ ರಾಜ್ಯಸಭೆ ಕಲಾಪಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದರು.
ಡಿಸೆಂಬರ್ 14, 2012 ಹಿಂದೂಸ್ತಾನ್ ಟೈಮ್ಸ್ ಡಿಸೆಂಬರ್ 14, 2012 ರಂದು ಈ ಕುರಿತು ವರದಿ ಮಾಡಿತ್ತು. ವರದಿಯಲ್ಲಿ ಮಾಯಾವತಿ ಅವರು ರಾಜ್ಯಸಭೆಯಲ್ಲಿ ಅಧ್ಯಕ್ಷ ಹಾಮಿದ್ ಅನ್ಸಾರಿ ಅವರನ್ನು ಮತ್ತು ಅವರ ಸ್ಥಾನವನ್ನು ತಾನು ಗೌರವಿಸುತ್ತೇನೆ. ಅವರು ಸದನವು ಸುಗಮವಾಗಿ ನಡೆಯಲು ಮತ್ತು ಮಸೂದೆಯನ್ನು ಮಂಡಿಸಲು ಅನುಕೂಲವಾಗುವಂತೆ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಅಡೆತಡೆಗಳಿಂದಾಗಿ ಸಂಸತ್ತಿನ ಕಳೆದ ಅಧಿವೇಶನ, ಪ್ರಸ್ತುತ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲು ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ಅವರು ಹೇಳಿದ್ದರು.
ಹಾಮಿದ್ ಅನ್ಸಾರಿ ಅವರು ಧಾರ್ಮಿಕ ಆಚರಣೆಗಳಿಗಾಗಿ ಸಂಸತ್ತಿನ ಕಲಾಪವನ್ನು ಅಡ್ಡಿಪಡಿಸಿದ್ದರು ಎಂದು ಆರೋಪಿಸಿ, ಅವರನ್ನು ನಕಾರಾತ್ಮಕವಾಗಿ ಚಿತ್ರಿಸಲು ಪ್ರಯತ್ನಿಸುವ ವೀಡಿಯೊದೊಂದಿಗೆ ತಪ್ಪುದಾರಿಗೆಳೆಯುವ ಮಾಹಿತಿಗಳು ಹರಡುತ್ತಿವೆ. ವೀಡಿಯೊದ ನೈಜ ಸನ್ನಿವೇಶವು ಬಡ್ತಿಗಳ ಮಸೂದೆಯಲ್ಲಿನ ಮೀಸಲಾತಿಯ ರಾಜಕೀಯ ಚರ್ಚೆಯಲ್ಲಿ ಬೇರೂರಿದೆಯೇ ಹೊರತು ಧಾರ್ಮಿಕ ಕಾರಣದದಿಂದಲ್ಲ ಎನ್ನುವ ಅಂಶವನ್ನು ಗಮನಿಸಬೇಕು.
ಫ್ಯಾಕ್ಟ್ ಚೆಕ್ ಮಾಡಿದಾಗ, ಮಾಯಾವತಿಯವರು ಮಾತನಾಡಿರುವ ವೀಡಿಯೊವು ಸುಳ್ಳು ಮಾಹಿತಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳಲ್ಲಿ ವೈರಲ್ ಆಗಿರುವ ವೀಡಿಯೊ ಜೊತೆಗಿನ ಸಂದೇಶವನ್ನು ಬೆಂಬಲಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಮಿದ್ ಅನ್ಸಾರಿಯವರು ನಮಾಝ್ ಗಾಗಿ ರಾಜ್ಯ ಸಭೆಯ ಕಲಾಪಗಳಿಗೆ ಅಡ್ಡಿಪಡಿಸಿದ್ದಾರೆ ಎಂದು ಸಂಬಂಧ ಕಲ್ಪಿಸುವ ಪ್ರಯತ್ನವು ಆಧಾರರಹಿತವಾಗಿದೆ. ಅದು ಸುಳ್ಳು ಮಾಹಿತಿಯನ್ನು ಹಂಚುತ್ತಿದೆ.