ಬಿಜೆಪಿ ವಿದ್ಯಾರ್ಥಿ ಘಟಕದಿಂದ ತೆಲಂಗಾಣ ಮುಖ್ಯಮಂತ್ರಿ ಹುದ್ದೆಯವರೆಗೆ: ರೇವಂತ್ ರೆಡ್ಡಿ ಬೆಳೆದು ಬಂದ ಹಾದಿ ಇಲ್ಲಿದೆ…

Update: 2023-12-05 18:37 GMT

Photo: Revanth Reddy/instagram

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್, ಮುಖ್ಯಮಂತ್ರಿ ಹುದ್ದೆಗಾಗಿನ ಆಯ್ಕೆಯ ಕುರಿತು ಕಳೆದ 48 ಗಂಟೆಗಳಿಂದ ಎದ್ದಿದ್ದ ನಾನಾ ಬಗೆಯ ಊಹಾಪೋಹಗಳಿಗೆ ಕೊನೆಗೂ ತೆರೆ ಎಳೆದಿದ್ದು, ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿದೆ ಎಂದು ndtv.com ವರದಿ ಮಾಡಿದೆ.

ರೇವಂತ್ ರೆಡ್ಡಿ ಅನ್ನು ಮುಖ್ಯಮಂತ್ರಿ ಹುದ್ದೆಗೆ ದೃಢಪಡಿಸಲು ಕೊಂಚ ವಿಳಂಬವಾಗಿದ್ದು, ನೂತನವಾಗಿ ಚುನಾಯಿತಗೊಂಡಿರುವ 64 ಶಾಸಕರ ಪೈಕಿ 40 ಶಾಸಕರು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಿಗೇ ಗುರುವಾರದಂದು ರೇವಂತ್ ರೆಡ್ಡಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್ ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್ ಪ್ರಚಾರದಲ್ಲಿ ಕ್ರಿಯಾಶೀಲ ಮುಖವಾಗಿದ್ದ ರೇವಂತ್ ರೆಡ್ಡಿ, ಮುಖ್ಯಮಂತ್ರಿ ಹುದ್ದೆಯವರೆಗೆ ಬೆಳೆದು ಬಂದ ಹಾದಿಯೂ ಕುತೂಹಲಕವಾಗಿದೆ. ಬಿಜೆಪಿ ವಿದ್ಯಾರ್ಥಿ ಘಟಕದ ಮೂಲಕ ರಾಜಕೀಯ ರಂಗಕ್ಕೆ ಕಾಲಿಟ್ಟ ಅವರು, ನಂತರ ಟಿಆರ್‍ಎಸ್ ಹಾಗೂ ತೆಲುಗು ದೇಶಂ ಪಕ್ಷಗಳಲ್ಲೂ ಕಾರ್ಯನಿರ್ವಹಿಸಿ, 2017ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು.

ಅತ್ಯಂತ ಚೈತನ್ಯಶಾಲಿ ಯುವಕರಾದ ರೇವಂತ್ ರೆಡ್ಡಿ, ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥರಾಗಿ ನೇಮಕವಾದಾಗ ಕೇವಲ ನೂರರ ಸಂಖ್ಯೆಯಲ್ಲಿ ನೆರೆದಿದ್ದವರು ಮಾತ್ರ ಆ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಇದಾದ ನಂತರ, ಸದಾ ಬೀದಿ ಹೋರಾಟಗಳಲ್ಲಿ ತಮ್ಮ ಇರುವಿಕೆಯನ್ನು ಪ್ರದರ್ಶಿಸಿದ್ದ ರೇವಂತ್ ರೆಡ್ಡಿ, ಆಡಳಿತಾರೂಢ ಬಿಆರ್ಎಸ್ ವಿರುದ್ಧ ಹಲವಾರು ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದರು. ಅವರಲ್ಲಿನ ಈ ಚೈತನ್ಯವು ಅವರಿಗೆ ಕೇವಲ ಮತಗಳನ್ನು ಮಾತ್ರ ತಂದುಕೊಡದೆ, ಕೆಲವು ಅಚ್ಚರಿಗೊಳಿಸುವ ಕ್ಷಣಗಳನ್ನೂ ತಂದುಕೊಟ್ಟಿದೆ.

ರೇವಂತ್ ರೆಡ್ಡಿ ರಾಜಕೀಯ ಮುನ್ನೆಲೆಗೆ ಬಂದಿದ್ದು 2021ರಲ್ಲಿ ಅವರು ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥರಾಗಿ ನೇಮಕವಾದಾಗ. ಕೇವಲ ನಾಲ್ಕು ವರ್ಷಗಳ ಹಿಂದಷ್ಟೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಅವರಿಗೆ ದೊರೆತಿದ್ದ ಉನ್ನತ ಹುದ್ದೆ ಅದಾಗಿತ್ತು.

2006ರಲ್ಲಿ ಜಿಲ್ಲಾ ಪರಿಷತ್ ಸದಸ್ಯರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದ ರೇವಂತ್ ರೆಡ್ಡಿ, ಎರಡು ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾಗಿ ಹಾಗೂ ಇದೀಗ ಮುಖ್ಯಮಂತ್ರಿಯಾಗಿ ರಾಜಕೀಯ ಜೀವನದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದಾರೆ.

ಚುನಾವಣಾ ಸಮಾವೇಶವೊಂದರಲ್ಲಿ ಮೊಟ್ಟೆ ಹೊಡೆತವನ್ನೂ ತಿಂದಿದ್ದ ರೇವಂತ್ ರೆಡ್ಡಿ, 2015ರಲ್ಲಿ ವಿಧಾನ ಪರಿಷತ್ ಸದಸ್ಯರೊಬ್ಬರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಡಿಪಿ ಪರವಾಗಿ ಮತ ಚಲಾಯಿಸುವಂತೆ ಲಂಚದ ಆಮಿಷವೊಡ್ಡುತ್ತಿದ್ದ ವಿಡಿಯೊವೊಂದರಲ್ಲಿ ಸಿಕ್ಕಿ ಬಿದ್ದಿದ್ದರು. ಅವರು ಈ ಪ್ರಕರಣದಲ್ಲಿ ಜೈಲುಪಾಲಾಗಿದ್ದರಾದರೂ, ನಂತರ ಜಾಮೀನು ಪಡೆದು ಹೊರ ಬರುವಲ್ಲಿ ಯಶಸ್ವಿಯಾಗಿದ್ದರು.

ಲಲಿತ ಕಲೆಯಲ್ಲಿ ಪದವೀಧರರಾಗಿರುವ ರೇವಂತ್ ರೆಡ್ಡಿ, ಕಾಂಗ್ರೆಸ್ ನಾಯಕರೊಬ್ಬರ ಸೋದರ ಸೊಸೆಯಾದ ಗೀತಾ ಎಂಬುವವರನ್ನು ವಿವಾಹವಾಗಿದ್ದಾರೆ. ಈ ದಂಪತಿಗಳಿಗೆ ನಿಮಿಷಾ ಎಂಬ ಓರ್ವ ಪುತ್ರಿಯಿದ್ದು, ಆಕೆಗೆ ಓರ್ವ ಪುತ್ರನಿದ್ದಾನೆ.

ಕ್ರಿಯಾಶೀಲ, ಚೈತನ್ಯಶಾಲಿ ವ್ಯಕ್ತಿತ್ವದೊಂದಿಗೆ ಹಲವು ಆರೋಪಗಳಿಗೂ ಗುರಿಯಾಗಿರುವ ರೇವಂತ್ ರೆಡ್ಡಿ ಎದುರು ಸರ್ಕಾರವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗಬೇಕಾದ ಗುರುತರ ಹೊಣೆಗಾರಿಕೆ ಇದೆ. ಮೇಲಾಗಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ಗೆದ್ದು ಕೊಡಬೇಕಾದ ಕಠಿಣ ಸವಾಲೂ ಇದೆ. ಇದಲ್ಲದೆ, ಮುಂದಿನ ವರ್ಷ ನಡೆಯಲಿರುವ ಆಂಧ‍್ರಪ್ರದೇಶ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವು ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವಂತೆ ಮಾಡಲು ಕಾರ್ಯತಂತ್ರಗಳನ್ನು ರೂಪಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News