ಮಹಾರಾಷ್ಟ್ರ | ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಜಲ್ನಾದಲ್ಲಿ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆ!
ಜಲ್ನಾ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗರ್ಕರ್, ವಿಧಾನಸಭೆ ಚುನಾವಣೆಗೆ ಮುನ್ನ ಜಲ್ನಾದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರ್ಪಡೆಯಾಗಿದ್ದಾನೆ.
ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5, 2017 ರಂದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಮಹಾರಾಷ್ಟ್ರದ ತನಿಖಾ ಸಂಸ್ಥೆಗಳ ಸಹಾಯದಿಂದ ಕರ್ನಾಟಕದಲ್ಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ಶ್ರೀಕಾಂತ್ ಪಂಗರ್ಕರ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.
2001 ಮತ್ತು 2006 ರ ನಡುವೆ ಅವಿಭಜಿತ ಶಿವಸೇನೆಯ ಜಲ್ನಾ ಪುರಸಭೆಯ ಕೌನ್ಸಿಲರ್ ಆಗಿದ್ದ ಶ್ರೀಕಾಂತ್ ಪಂಗರ್ಕರ್ ನನ್ನು ಆಗಸ್ಟ್ 2018 ರಲ್ಲಿ ಬಂಧಿಸಲಾಗಿತ್ತು. ಈ ವರ್ಷ ಸೆಪ್ಟೆಂಬರ್ 4 ರಂದು ಆತ ಕರ್ನಾಟಕ ಹೈಕೋರ್ಟ್ ನಿಂದ ಜಾಮೀನು ಪಡೆದುಕೊಂಡಿದ್ದಾನೆ.
2011 ರಲ್ಲಿ ಶಿವಸೇನೆಯಿಂದ ಟಿಕೆಟ್ ನಿರಾಕರಿಸಿದ ನಂತರ, ಪಂಗರ್ಕರ್ ಬಲಪಂಥೀಯ ಹಿಂದೂ ಜನಜಾಗೃತಿ ಸಮಿತಿಗೆ ಸೇರಿದ್ದಾನೆ. ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಶಿವಸೇನೆ ಶಿಂಧೆ ಬಣದ ನಾಯಕ ಮತ್ತು ರಾಜ್ಯದ ಮಾಜಿ ಸಚಿವ ಅರ್ಜುನ್ ಖೋಟ್ಕರ್ ಅವರ ಸಮ್ಮುಖದಲ್ಲಿ ಆತ ಪಕ್ಷಕ್ಕೆ ಮರಳಿದ್ದಾನೆ.
"ಪಂಗರ್ಕರ್ ಅವರು ಶಿವಸೈನಿಕರಾಗಿದ್ದವರು. ಈಗ ಮತ್ತೆ ಪಕ್ಷಕ್ಕೆ ಮರಳಿದ್ದಾರೆ. ಅವರನ್ನು ಜಲ್ನಾ ವಿಧಾನಸಭಾ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ" ಎಂದು ಖೋಟ್ಕರ್ ಸುದ್ದಿಗಾರರಿಗೆ ತಿಳಿಸಿದರು.
ಖೋಟ್ಕರ್ ಅವರಿಗೆ ಜಲ್ನಾದಿಂದ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯಿದೆ. ಆದರೆ ಮಹಾಯುತಿ ಮೈತ್ರಿಯಲ್ಲಿ ಸೀಟು ಹಂಚಿಕೆ ಚರ್ಚೆಗಳು ಇನ್ನೂ ನಡೆಯುತ್ತಿರುವುದರಿಂದ, ಅದು ಅಂತಿಮವಾಗಿಲ್ಲ. ಈ ಕ್ಷೇತ್ರವನ್ನು ಕಾಂಗ್ರೆಸ್‌ನ ಕೈಲಾಶ್ ಗೊರಂಟ್ಯಾಲ್ ಪ್ರತಿನಿಧಿಸುತ್ತಿದ್ದಾರೆ.
ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.