ಗುಜರಾತ್ ನಲ್ಲಿ ಗೂಗಲ್ ಫಿನ್ ಟೆಕ್ ಆಪರೇಷನ್ ಸೆಂಟರ್: ಸುಂದರ್ ಪಿಚೈ
ವಾಷಿಂಗ್ಟನ್: ಗುಜರಾತ್ ನಲ್ಲಿ ಗೂಗಲ್ ಸಂಸ್ಥೆ ತಮ್ಮ ಜಾಗತಿಕ ಫಿನ್ ಟೆಕ ಆಪರೇಷನ್ ಸೆಂಟರ್ ತೆರೆಯಲಿದೆ ಎಂದು ಕಂಪನಿಯ ಮುಖ್ಯಸ್ಥ ಸುಂದರ್ ಪಿಚೈ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಪಿಚೈ ಈ ಪ್ರಕಟಣೆ ನೀಡಿದ್ದಾರೆ.
"ಮೋದಿಯವರ ಅಮೆರಿಕ ಭೇಟಿ ವೇಳೆ ಅವರನ್ನು ಭೇಟಿ ಮಾಡಿದ್ದು ನಿಜವಾಗಿಯೂ ಒಂದು ಗೌರವ. ಗೂಗಲ್ ಭಾರತದ ಡಿಜಿಟಲೀಕಣ ನಿಧಿಯಲ್ಲಿ 10 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಪ್ರಧಾನಿಯವರ ಜತೆ ನಡೆದ ಮಾತುಕತೆ ವೇಳೆ ಸ್ಪಷ್ಟಪಡಿಸಿದ್ದೇವೆ. ಅಂತೆಯೇ ಗುಜರಾತ್ ನ ಗಿಫ್ಟ್ ಸಿಟಿಯಲ್ಲಿ ಜಾಗತಿಕ ಫಿನ್ಟೆಕ್ ಆಪರೇಷನ್ ಸೆಂಟರ್ ತೆರೆಯುವುದನ್ನು ಘೋಷಿಸುತ್ತಿದ್ದೇವೆ" ಎಂಬ ಪಿಚೈ ಹೇಳಿಕೆಯನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
ಮೋದಿ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆ ದೂರದೃಷ್ಟಿಯದ್ದು ಎಂದು ಶ್ಲಾಘಿಸಿದ ಪಿಚೈ, ಈ ಯೋಜನೆ ಇದೇ ರೀತಿ ಡಿಜಿಟಲೀಕರಣ ಮಾಡಲು ಹೊರಟಿರುವ ಇತರ ದೇಶಗಳಿಗೂ ನೀಲಿ ನಕಾಶೆ ಎಂದು ವಿಶ್ಲೇಷಿಸಿದರು.
ಗುಜರಾತ್ನ ರಾಜಧಾನಿ ಗಾಂಧಿನಗರದಲ್ಲಿ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್ ಸಿಟಿಯನ್ನು ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಗಿಫ್ಟ್ ಸಿಟಿ ಎಂದು ಕರೆಯಲಾಗುತ್ತದೆ.
ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಆ್ಯಪಲ್ ಸಿಇಓ ಟಿಮ್ ಕುಕ್ ಕೂಡಾ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಜೈಡೇನ್ ಅವರನ್ನು ಶುಕ್ರವಾರ ಭೇಟಿ ಮಾಡಿದರು.