ಗಾಝಾ ಕದನವಿರಾಮ ಒಪ್ಪಂದ | ಅಮೆರಿಕದ ಪ್ರಸ್ತಾವನೆಗೆ ಹಮಾಸ್ ಒಪ್ಪಿಗೆ
ಗಾಝಾ : ಯೋಧರು ಮತ್ತು ಪುರುಷರು ಸೇರಿದಂತೆ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಕುರಿತು ಮಾತುಕತೆಯನ್ನು ಪ್ರಾರಂಭಿಸುವ ಅಮೆರಿಕದ ಪ್ರಸ್ತಾಪವನ್ನು ಹಮಾಸ್ ಒಪ್ಪಿಕೊಂಡಿರುವುದಾಗಿ ಹಲವಾರು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಇಸ್ರೇಲ್ ಶಾಶ್ವತ ಕದನ ವಿರಾಮಕ್ಕೆ ಬದ್ಧವಾಗಬೇಕೆಂಬ ಷರತ್ತನ್ನು ಹಮಾಸ್ ಕೈಬಿಟ್ಟಿದೆ. ಆರು ವಾರಗಳ ಪ್ರಥಮ ಹಂತದಲ್ಲಿ ಈ ಷರತ್ತಿನ ಕುರಿತು ಮಾತುಕತೆ ನಡೆಸಲು ನಿರ್ಧರಿಸಿದೆ. ಇದೀಗ ಈ ಪ್ರಸ್ತಾವನೆಯನ್ನು ಇಸ್ರೇಲ್ ಕೂಡಾ ಸಮ್ಮತಿಸಿದರೆ ಗಾಝಾದಲ್ಲಿ ಇಸ್ರೇಲ್-ಹಮಾಸ್ ನಡುವೆ 9 ತಿಂಗಳಿಂದ ಮುಂದುವರಿದಿರುವ ಯುದ್ಧ ಅಂತ್ಯಗೊಳಿಸುವ ಒಪ್ಪಂದ ಸಾಧ್ಯವಾಗುವ ಆಶಾವಾದ ಮೂಡಿದೆ ಎಂದು ವರದಿಯಾಗಿದೆ.
ಕೇಂದ್ರ ಗುಪ್ತಚರ ವಿಭಾಗ(ಸಿಐಎ) ನಿರ್ದೇಶಕ ವಿಲಿಯಂ ಬನ್ರ್ಸ್ ಮುಂದಿನ ವಾರ ಮಾತುಕತೆಗಾಗಿ ಖತರ್ ಗೆ ಪ್ರಯಾಣಿಸಲಿದ್ದಾರೆ. ತಾತ್ಕಾಲಿಕ ಕದನ ವಿರಾಮ, ನೆರವು ವಿತರಣೆ ಮತ್ತು ಒಂದು ವೇಳೆ ಯೋಜನೆಯ ಎರಡನೇ ಹಂತ ಜಾರಿಗೊಳಿಸುವ ಬಗ್ಗೆ ಮಾತುಕತೆ ಮುಂದುವರಿದರೆ ಇಸ್ರೇಲ್‍ನ ತುಕಡಿ ವಾಪಸಾತಿಯ ವಿಷಯದಲ್ಲಿ ಅಮೆರಿಕ, ಇಸ್ರೇಲ್, ಖತರ್ ಮತ್ತು ಈಜಿಪ್ಟ್ ಗಳು ಲಿಖಿತ ರೂಪದಲ್ಲಿ ಗ್ಯಾರಂಟಿ ನೀಡಬೇಕೆಂಬ ಹಮಾಸ್ ಬೇಡಿಕೆಯ ಬಗ್ಗೆ ಖತರ್ ನಲ್ಲಿ ಮುಂದಿನ ವಾರ ಮಾತುಕತೆ ನಡೆಯಲಿದೆ.
ಈ ಹಿಂದೆ ಹಮಾಸ್‍ನ ಷರತ್ತುಗಳು ಸ್ವೀಕಾರಾರ್ಹವಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದ ಇಸ್ರೇಲ್ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕದನ ವಿರಾಮ ಒಪ್ಪಂದ ಸಾಧ್ಯವಾಗುವ ನೈಜ ಅವಕಾಶವಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಎರಡೂ ಕಡೆಯವರ ನಡುವಿನ ಅಂತರ ಈಗಲೂ ಉಳಿದಿದ್ದರೂ ಮುಂದಿನ ವಾರ ಕದನ ವಿರಾಮ ಮಾತುಕತೆ ಮುಂದುವರಿಯಲಿದೆ. ಪ್ರಾಥಮಿಕ ಮಾತುಕತೆಗಾಗಿ ಖತರ್‍ಗೆ ತೆರಳಿದ್ದ ಮೊಸ್ಸಾದ್(ಇಸ್ರೇಲ್ ಗುಪ್ತಚರ ಏಜೆನ್ಸಿ) ಮುಖ್ಯಸ್ಥರು ಇಸ್ರೇಲ್‍ಗೆ ಮರಳಿದ್ದು ಅವರ ವರದಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಕ್ತಾರರು ಶುಕ್ರವಾರ ಹೇಳಿಕೆ ನೀಡಿದ್ದರು.
ಈ ಮಧ್ಯೆ, ಒತ್ತೆಯಾಳುಗಳ ಕುಟುಂಬದವರು ಇಸ್ರೇಲ್ ರಾಜಧಾನಿ ಟೆಲ್‍ಅವೀವ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಒಪ್ಪಂದಕ್ಕೆ ಸಹಿ ಹಾಕುವಂತೆ ಪ್ರಧಾನಿಯನ್ನು ಆಗ್ರಹಿಸಿದ್ದಾರೆ.
► ಚೆಂಡು ಇಸ್ರೇಲ್ ಅಂಗಣದಲ್ಲಿದೆ: ಹಮಾಸ್
ಗಾಝಾ ಕದನವಿರಾಮ ಒಪ್ಪಂದದ ಪ್ರಸ್ತಾವನೆಯ ಬಗ್ಗೆ ಇಸ್ರೇಲ್‍ನ ಪ್ರತಿಕ್ರಿಯೆಯನ್ನು ಕಾಯುತ್ತಿರುವುದಾಗಿ ಹಮಾಸ್ ಹೇಳಿದೆ.
`ನಮ್ಮ ಪ್ರತಿಕ್ರಿಯೆಯನ್ನು ಮಧ್ಯಸ್ಥಿಕೆದಾರರ ಎದುರು ಇರಿಸಿದ್ದೇವೆ. ಇದೀಗ ಆಕ್ರಮಣಕಾರರ (ಇಸ್ರೇಲ್) ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ ಎಂದು ಹಮಾಸ್ ಮೂಲಗಳು ಹೇಳಿವೆ. ಹಮಾಸ್‍ನ ಪ್ರತಿಕ್ರಿಯೆಯ ಬಗ್ಗೆ ಇಸ್ರೇಲ್‍ನ ನಿಯೋಗ ಖತರ್ ಅಧಿಕಾರಿಗಳ ಜತೆ ಚರ್ಚಿಸಿದ್ದು ಕೆಲ ದಿನಗಳೊಳಗೆ ತನ್ನ ಅಭಿಪ್ರಾಯ ತಿಳಿಸುವ ನಿರೀಕ್ಷೆಯಿದೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.