ಹರ್ಯಾಣ ಸಿಎಂ ಖಟ್ಟರ್‌, ಸಚಿವ ಸಂಪುಟ ರಾಜೀನಾಮೆ

Update: 2024-03-12 07:08 GMT

ಮನೋಹರ್‌ಲಾಲ್‌ ಖಟ್ಟರ್‌ (PTI)

ಹೊಸದಿಲ್ಲಿ: ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಇಂದು ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಅವರ ಸಂಪೂರ್ಣ ಸಚಿವ ಸಂಪುಟ ರಾಜೀನಾಮೆ ನೀಡಿದೆ. ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ವಿಚಾರದಲ್ಲಿ ಆಡಳಿತ ಬಿಜೆಪಿ ಮತ್ತು ಜೆಜೆಪಿ ಮೈತ್ರಿ ನಡುವೆ ಒಡಕು ಉಂಟಾಗಿದೆ ಎಂಬ ವದಂತಿಗಳ ನಡುವೆ ಈ ಬೆಳವಣಿಗೆ ನಡೆದಿದೆ.

ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಬಿಜೆಪಿ ಹಾಗೂ ದುಷ್ಯಂತ್‌ ಚೌಟಾಲ ಅವರ ಜೆಜೆಪಿ ಹೇಳಿಕೊಂಡಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹರ್ಯಾಣದ ಎಲ್ಲಾ 10 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು.

ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಒಟ್ಟು 90 ಕ್ಷೇತ್ರಗಳಲ್ಲಿ ಜೆಜೆಪಿ 10 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದರೆ ಬಿಜೆಪಿ 40ರಲ್ಲಿ ಜಯ ಸಾಧಿಸಿತ್ತು. ಬಹುಮತಕ್ಕೆ ಆರು ಸ್ಥಾನಗಳ ಕೊರತೆಯ ಹಿನ್ನೆಲೆಯಲ್ಲಿ ಬಿಜೆಪಿಯು ಜೆಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಸಾಧಿಸಿತ್ತು.

ಮನೋಹರ್‌ ಲಾಲ್‌ ಖಟ್ಟರ್‌ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂದೂ ತಿಳಿಯಲಾಗಿದೆ. ಖಟ್ಟರ್‌ ಅವರು ಪ್ರಸ್ತುತ ಬಿಜೆಪಿಯ ಸಂಜಯ್‌ ಭಾಟಿಯಾ ಸಂಸದರಾಗಿರುವ ಕರ್ನಾಲ್‌ ಕ್ಷೇತ್ರದಿಂದ ಸ್ಪರ್ಧಿಸಬಹುದೆಂದು ತಿಳಿಯಲಾಗಿದೆ. ಸಂಜಯ್‌ ಭಾಟಿಯಾ ಅವರು ಸಿಎಂ ಆಗಲೂಬಹುದು ಎಂದು ಹೇಳಲಾಗುತ್ತಿದೆ.

ಕೆಲ ಮೂಲಗಳ ಪ್ರಕಾರ ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಪಡೆದು ಖಟ್ಟರ್ ಮತ್ತೆ ಸಿಎಂ ಆಗಬಹುದು. ಈ ಸರ್ಕಾರ ಎರಡು ಉಪ ಮುಖ್ಯಮಂತ್ರಿಗಳನ್ನೂ ಹೊಂದಬಹುದೆಂದು ಹೇಳಲಾಗಿದೆ. ಐದು ಜೆಜೆಪಿ ಶಾಸಕರು ಬಿಜೆಪಿಗೆ ಪಕ್ಷಾಂತರಗೈಯ್ಯಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಸದ್ಯ ಜೆಜೆಪಿ ಶಾಸಕರಾಗಿರುವ ದೇವಿಂದರ್ ಬಬ್ಲಿ, ರಾಮನಿವಾಸ್, ರಾಮ್ ಕುಮಾರ್ ಗೌತಮ್, ಈಶ್ವರ್ ಸಿಂಗ್ ಮತ್ತು ಜೋಗಿ ರಾಮ್ ಸಿಹಾಗ್ ಅವರು ಬಿಜೆಪಿ ಸೇರಲಿದ್ದಾರೆಂದು ಹೇಳಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News