ಹರ್ಯಾಣ: ಬಜರಂಗ ದಳದ ಬೆದರಿಕೆಗಳ ನಡುವೆಯೇ ಗುರುಗ್ರಾಮ ತೊರೆಯುತ್ತಿರುವ ಮುಸ್ಲಿಂ ವಲಸೆ ಕಾರ್ಮಿಕರು

Update: 2023-08-05 16:51 GMT

ಗುರುಗ್ರಾಮ: ಬಜರಂಗ ದಳದ ಬೆದರಿಕೆಗಳಿಂದಾಗಿ ಮುಸ್ಲಿಮ್ ವಲಸೆ ಕಾರ್ಮಿಕರು ಗುರುಗ್ರಾಮವನ್ನು ತೊರೆಯುತ್ತಿದ್ದಾರೆ ಎಂಬ ವರದಿಗಳ ನಡುವೆಯೇ ಸುದ್ದಿಗಾರರ ತಂಡವೊಂದು ತಳಮಟ್ಟದ ಸ್ಥಿತಿಯನ್ನು ಅರಿಯಲು ಸೆಕ್ಟರ್ 70 ‘ಎ’ರಲ್ಲಿಯ ಮೂರು ಕೊಳಗೇರಿ ಸಮುಚ್ಚಯಗಳಿಗೆ ಭೇಟಿ ನೀಡಿತ್ತು.

ಹರ್ಯಾಣದ ನೂಹ್ ನಲ್ಲಿ ಭುಗಿಲೆದ್ದಿದ್ದ ಕೋಮು ಹಿಂಸಾಚಾರ ಗುರುಗ್ರಾಮದಂತಹ ಇತರ ಪ್ರದೇಶಗಳಿಗೂ ಹರಡಿದ ಬಳಿಕ ದುಡಿಯುವ ವರ್ಗದ ಮುಸ್ಲಿಮ್ ಕುಟುಂಬಗಳ ಬದುಕು ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ಎನ್ನುವುದು ಸ್ಪಷ್ಟವಾಗಿದೆ. ಈ ಕೊಳಗೇರಿಗಳು ಹಲವಾರು ಗಗನಚುಂಬಿ ಕಟ್ಟಡಗಳ ಪರಿಸರದಲ್ಲಿಯೇ ಇವೆ. ಆದರೆ ಕೊಳಗೇರಿಗಳನ್ನು ಈ ಭವ್ಯ ಕಟ್ಟಡಗಳೊಂದಿಗೆ ಸಂಪರ್ಕಿಸುವ ರಸ್ತೆಗಳು ಕೆಸರು ಮತ್ತು ಹೊಂಡಗಳಿಂದ ತುಂಬಿವೆ.

ಹಿಂಸಾಚಾರದ ಬಳಿಕ ತಾವು ಬೆದರಿಕೆಗಳಿಗೆ ಗುರಿಯಾಗಿದ್ದೇವೆ, ಪ್ರದೇಶವನ್ನು ತೆರವುಗೊಳಿಸುವಂತೆ ತಮಗೆ ಸೂಚಿಸಲಾಗುತ್ತಿದೆ ಎಂದು ಮುಸ್ಲಿಮ್ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳು ಆರೋಪಿಸಿದವು. ಸುದ್ದಿಗಾರರ ತಂಡವು ಈ ಕೊಳಗೇರಿಗಳ ಕೆಲವು ನಿವಾಸಿಗಳನ್ನು ಭೇಟಿಯಾದಾಗ ಅವರಲ್ಲಿ ತಮ್ಮ ಭವಿಷ್ಯದ ಬಗ್ಗೆ ಭಯ, ಅನಿಶ್ಚಿತತೆ ಮತ್ತು ಗಾಢ ದುಃಖ ಸ್ವಷ್ಟವಾಗಿ ಕಂಡುಬಂದಿದ್ದವು.

ತನ್ನ ಪುಟ್ಟ ತಗಡಿನ ಶೆಡ್ ನಲ್ಲಿ ಧಗೆಯನ್ನು ತಾಳದೇ ಹೊರಗೆ ಕುಳಿತಿದ್ದ ಶಬಾನಾ (32),ಆ.31ರ ಘರ್ಷಣೆಗಳ ಬಳಿಕ ಹಲವಾರು ಕುಟುಂಬಗಳು ಈ ಪ್ರದೇಶವನ್ನು ತೊರೆದಿವೆ ಎಂದು ಹೇಳಿದರು.

‘ನಾನು ನನ್ನ ಮೂವರು ಪುತ್ರಿಯರನ್ನು ಉತ್ತರ ಪ್ರದೇಶದಲ್ಲಿಯ ನನ್ನ ಗ್ರಾಮಕ್ಕೆ ಕಳುಹಿಸಿದ್ದೇನೆ. ಪ್ರಸಕ್ತ ವಾತಾವರಣವನ್ನು ನಂಬಲು ಸಾಧ್ಯವಿಲ್ಲ. ನಮ್ಮ ಸುತ್ತ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಜನರು ಪರಸ್ಪರರ ಧರ್ಮಗಳನ್ನು ಕೇಳುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ನನ್ನ ಪುತ್ರಿಯರ ಸುರಕ್ಷತೆಯ ಬಗ್ಗೆ ಹೆದರಿ ನಾನು ಅವರನ್ನು ಗ್ರಾಮಕ್ಕೆ ವಾಪಸ್ ಕಳುಹಿಸಿದ್ದೇನೆ’ ಎಂದರು. ಇದು ಒಂದು ನಿದರ್ಶನ ಮಾತ್ರ. ಇಂತಹ ಹಲವಾರು ಶಬಾನಾರು ತಮ್ಮ ಗೋಳು ತೋಡಿಕೊಂಡರು. ಪಾಲ್ದಾ ಗ್ರಾಮವನ್ನು ಸುದ್ದಿಗಾರರ ತಂಡ ತಲುಪಿದಾಗ ಅಲ್ಲಿಯ ಗುಡಿಸಲುಗಳ ಹೊರಗೆ ಪೊಲೀಸರು ಉಪಸ್ಥಿತಿಯಿತ್ತು. ಅವರ ಎದುರಿನಲ್ಲೇ ಹಲವಾರು ಕುಟುಂಬಗಳು ತಮ್ಮ ಸೊತ್ತುಗಳೊಂದಿಗೆ ಟ್ಯಾಕ್ಸಿ ಮತ್ತು ಆಟೊರಿಕ್ಷಾಗಳಲ್ಲಿ ಅವಸರದಿಂದ ಜಾಗ ಖಾಲಿ ಮಾಡುತ್ತಿದ್ದರು. ಮುಸ್ಲಿಮ್ ವಲಸೆ ಕಾರ್ಮಿಕರು ಪ್ರದೇಶದಿಂದ ಪಲಾಯನ ಮಾಡಲು ಭಯ ಮುಖ್ಯ ಕಾರಣವಾಗಿದೆ ಎಂದು ಟ್ಯಾಕ್ಸಿಯನ್ನು ಹತ್ತುತ್ತಿದ್ದ ಹಸೀನಾ (24) ಹೇಳಿದ್ದಾರೆಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News