ದ್ವೇಷಭಾಷಣ: ವಿವಿಧ ಪಕ್ಷ, ಸಂಘಟನೆಗಳಿಂದ ಅಸ್ಸಾಂ ಸಿಎಂ ವಿರುದ್ಧ ದೂರು ದಾಖಲು

Update: 2023-07-18 16:47 GMT

ಹಿಮಂತ ಬಿಸ್ವ ಶರ್ಮಾ | Photo : PTI 

ಹೊಸದಿಲ್ಲಿ: ಬಂಗಾಳಿ ಭಾಷಿಕ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಿರುದ್ಧ ಸೋಮವಾರ ಹಲವಾರು ಪೊಲೀಸ್ ದೂರುಗಳು ದಾಖಲಾಗಿವೆ.

ರಾಜ್ಯದಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಲು ‘ಮಿಯಾ’ (ಬಂಗಾಳಿ ಮುಸ್ಲಿಮರು) ಕೃಷಿಕರು ಹಾಗೂ ವರ್ತಕರು ಕಾರಣರಾಗಿದ್ದಾರೆಂದು ಹಿಮಂತ ಬಿಸ್ವ ಶರ್ಮಾ ಹೇಳಿದ್ದರು. ಮಿಯಾಗಳನ್ನು ಉದ್ಯಮಗಳಿಂದ ಹೊರಗಿಡಲು ಅಸ್ಸಾಮಿನ ಯುವ ಜನತೆ ಕೃಷಿ ಮತ್ತಿತರ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದೆ ಬರಬೇಕೆಂದು ಅವರು ಕರೆ ನೀಡಿದ್ದರು.

ಮುಖ್ಯಮಂತ್ರಿಯ ಹಿಮಂತ ಬಿಸ್ವ ವಿರುದ್ಧ ‘ಅಸೊಮ್ ಸಂಖ್ಯಾಲಾಗು ಸಂಗ್ರಾಮ್ ಪರಿಷದ್’ ಎಂಬ ಅಲ್ಪಸಂಖ್ಯಾತರ ಸಂಘಟನೆಯು ಮಧ್ಯ ಅಸ್ಸಾಮಿನ ನಿಗಾವೊ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಮುಖ್ಯಮಂತ್ರಿಯವರು ತನ್ನ ವಿವಾದಾತ್ಮಕ ಹೇಳಿಕೆಗಳಿಂದ ‘ಮಿಯಾ’ ಹಾಗೂ ಅಸ್ಸಾಮಿ ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.

ಅಸ್ಸಾಂನ ರಾಜ್ಯಸಭಾ ನಾಯಕ ಅಜಿತ್ ಕುಮಾರ್ ಭೂಯಾನ್ ಅವರು ದಿಸ್ಪುರ ಪೊಲೀಸ್ ಠಾಣೆಯಲ್ಲಿ ಮುಖ್ಯಮಂತ್ರಿ ಶರ್ಮಾ ವಿರುದ್ಧ ದೂರು ದಾಖಲಿಸಿದ್ದಾರೆ. ಅಸ್ಸಾಂ ವಿಧಾನಸಭೆ ಹಾಗೂ ಸಚಿವಾಲಯದ ವ್ಯಾಪ್ತಿಯಲ್ಲಿರುವ ಗುವಾಹಟಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಅವರು ಮುಖ್ಯಮಂತ್ರಿಯವರು ನಿರ್ದಿಷ್ಟ ಸಮುದಾಯದ ಮೇಲೆ ಗುರಿಯಿರಿಸಿದ್ದಾರೆ. ದ್ವೇಷಭಾಷಣದ ವಿರುದ್ಧ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕೆಂದು ಸುಪ್ರೀಂಕೋರ್ಟ್ ಆದೇಶವಿದ್ದು, ಶರ್ಮಾರನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಸಿಪಿಎಂ ಪಕ್ಷದ ಅಸ್ಸಾಂ ರಾಜ್ಯ ಘಟಕವು ಕೇಂದ್ರ ಗುವಾಹಟಿಯಲ್ಲಿ ಲಟಾಸಿಲ್ ಪೊಲೀಸ್ ಠಾಣೆಯಲ್ಲಿ ದ್ವೇಷಭಾಷಣಕ್ಕಾಗಿ ಮುಖ್ಯಮಂತ್ರಿ ವಿರುದ್ಧ ದೂರು ದಾಖಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News